ಸಂಘಟನೆ ಸದಸ್ಯನಿಗೆ ಮತಾಂತರವಾಗುವಂತೆ ಬೆನ್ನು ಬಿದ್ದಿದ್ದ ಎಲಿಷಾ

Elisha-Elakapati
Published on

ಕಾರವಾರ:ದಲಿತ ರಕ್ಷಣಾ ವೇದಿಕೆಯ ಅದ್ಯಕ್ಷ ಎಲಿಷಾ ಎಲಕಪಾಟಿ ತಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದರು ಎಂದು ಅದೇ ಸಂಘಟನೆಯ ಪದಾಧಿಕಾರಿ ಮಾರುತಿ ನಾಯ್ಕ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಹಿಂದು ದೇವತೆಗಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ, ಪ್ರಧಾನಿಗಳನ್ನು ಅವಹೇಳನ ಮಾಡಿದ ಎಲಿಷಾ ಎಲಕಪಾಟಿ ಅವರ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಇದರಿಂದ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ಎಲಿಷಾ ಕಳೆದ ಒಂದು ವರ್ಷದಿಂದ ನನ್ನ ಹಿಂದೆ ಬಿದ್ದಿದ್ದರು. ನಿನಗೆ ಹಣ ಕೊಡುತ್ತೇನೆ. ಗುತ್ತಿಗೆ ಕೆಲಸ ಕೊಡಿಸುತ್ತೇನೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗು ಎಂದು ಪ್ರೇರೇಪಿಸುತ್ತಿದ್ದರು.

ಹಿಂದು ಧರ್ಮದ ಬಗ್ಗೆ, ದೇವರ ಬಗ್ಗೆ ಸದಾ ಅವಹೇಳನ ಮಾಡುತ್ತಿದ್ದರು. ಧರ್ಮ ಶ್ರದ್ಧಾಳುವಾದ ನನಗೆ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವರ ಬಗ್ಗೆ ದೂರು ನೀಡಲು ನನ್ನ ಬಳಿ ಯಾವುದೇ ಸಾಕ್ಷ್ಯಗಳಿರಲಿಲ್ಲ.
ಕಳೆದ ವಾರ ಸಂಘಟನೆಯ ಕಾರ್ಯದ ನಿಮಿತ್ತ ಗೋಕರ್ಣಕ್ಕೆ ಹೋಗಿ ಕಾರಿನಲ್ಲಿ ವಾಪಸಾಗುವ ಸಂದರ್ಭದಲ್ಲಿ ಎಲಿಷಾ ಮತ್ತೆ ಹಿಂದು ದೇವತೆಗಳ ಬಗ್ಗೆ ಅವಹೇಳನ ಮಾಡಲಾರಂಭಿಸಿದರು. ಇದರಿಂದ ಸಾಕ್ಷ್ಯ ಸಂಗ್ರಹಿಸುವ ಸಲುವಾಗಿ ಅವರು ಆಡಿದ ಮಾತುಗಳನ್ನು ವಿಡಿಯೋ ಮಾಡಿದೆ.

ಅವರ ವಿರುದ್ಧ ದೂರು ನೀಡಿದ್ದೇನೆ. ಠಾಣೆಗೆ ವಿಡಿಯೋ ಸಾಕ್ಷ್ಯವನ್ನೂ ಒದಗಿಸಿದ್ದೇನೆ. ಧರ್ಮ, ಸಮಾಜದ ಕುರಿತು ಶ್ರದ್ಧೆ, ಕಾಳಜಿಯಿಂದ ಹೀಗೆ ಮಾಡಿದ್ದೇನೆಯೇ ಹೊರತು ದ್ವೇಷ ಅಥವಾ ಬೇರಾವ ಕಾರಣದಿಂದಲೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಯುಗಾರಿ ಉತ್ಸವ ಸಮಿತಿಯ ಅಧ್ಯಕ್ಷ ಎನ್‌.ದತ್ತಾ ಮಾತನಾಡಿ, ಮತಾಂತರದ ಪಿಡುಗು ಯಾವುದೇ ಸರ್ಕಾರ ಅಥವಾ ಪಕ್ಷದ ಆಡಳಿತಕ್ಕೆ ಸೀಮಿತವಾಗಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ನಡೆಯುತ್ತಿತ್ತು. ಈಗಲೂ ಮುಂದುವರಿದಿದೆ. ಇದನ್ನು ತಡೆಯಲು ಎಲ್ಲ ಶ್ರದ್ಧಾಳುಗಳು ಒಗ್ಗೂಡಬೇಕು.

ಹಿಂದು ಧರ್ಮ, ಪರಂಪರೆ ಸಂಸ್ಕೃತಿ ಉಳಿಸಲು ಶ್ರಮಿಸಬೇಕು. ಹೊರತು ಇಂಥ ಸಂದರ್ಭದಲ್ಲಿ ಆಕ್ಷೇಪಣೆ ಮಾಡುವುದು ಸರಿಯಲ್ಲ ಎಂದರು.
ಅರುಣ ಕುಮಾರ್, ಗಿರೀಶ ರಾವ್, ಗುರುನಾಥ ಉಳ್ವೇಕರ್, ಅರುಣ ಪಾಟೀಲ, ಗೌರೀಶ ಹರಿಕಂತ್ರ, ಶಂಕರ ವಡ್ಡರ್, ರಾಜು ವಡ್ಡರ್, ರಾಜೇಶ ಶೇಟ್, ಅರುಣ ಗುನಗಿ, ಶ್ರೀಧರ ಗುನಗಿ ಸುದ್ದಿಗೋಷ್ಠಿಯಲ್ಲಿದ್ದರು.

ಫಲಕದಲ್ಲಿ ಹೆಸರು ತೆಗೆಯಿರಿ
ನಗರಸಭೆಯಿಂದ ಬಿಎಸ್‌ಎನ್‌ಎಲ್ ಕಚೇರಿಯ ಸಮೀಪ ನಿರ್ಮಿಸಿದ ಅಂಬೇಡ್ಕರ್ ವೃತ್ತದ ಉದ್ಘಾಟನಾ ಸಮಾರಂಭದ ಫಲಕದ ಮೇಲೆ ಎಲಿಷಾ ಎಲಕಪಾಟಿ ಹೆಸರನ್ನು ತೆಗೆದು ಹಾಕಬೇಕು. ಈ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಶಾಸಕ ಸತೀಶ ಸೈಲ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಹಾಗೂ ಇತರರು ನಗರಸಭೆ ಪೌರಾಯುಕ್ತರನ್ನು ಭೇಟಿಯಾಗಿ ಒತ್ತಾಯಿಸಿದರು.


ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ ದಬ್ಬಾಳಿಕೆ ಶುರುವಾಗಿದೆ. ಹಿಂದು ಧರ್ಮದ ವಿರುದ್ಧ ಅವಹೇಳನ, ಧಾರ್ಮಿಕ ತಾಣಗಳಲ್ಲಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದು ದೇವತೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಟ್ಟದಾಗಿ ಮಾತನಾಡಿದ ಎಲಿಷಾ ಎಲಕಪಾಟಿ ವಿರುದ್ಧ ಕಠಿಣ ಕ್ರಮ ವಹಿಸಬೇಕು. ಅವರು ಕೆಟ್ಟದಾಗಿ ಮಾತನಾಡುವಾಗ ಸುಮ್ಮನಿದ್ದು, ವಿಡಿಯೋ ಮಾಡಿರುವುದ್ಯಾರು ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದಿದ್ದಾರೆ.

ಗುತ್ತಿಗೆ ಕೊಡಬೇಡಿ:

ನಗರಸಭೆಯಿಂದ ನಗರದ ಹೂವಿನ ಚೌಕದಲ್ಲಿ ನಿರ್ಮಿಸಲು ಉದ್ದೇಶಿದಲಾಗಿರುವ ಹೆಂಜಾ ನಾಯ್ಕ ಅವರ ವೃತ್ತದ ಕಾಮಗಾರಿಯನ್ನು ಎಲಿಷಾ ಎಲಕಪಾಟಿ ಅವರಿಗೆ ನೀಡಲಾಗಿತ್ತು.

ಆದರೆ, ಧರ್ಮ ವಿರೋಧಿ ಎಲಿಷಾ ಅವರಿಗೆ ಯಾವುದೇ ಕಾರಣಕ್ಕೂ ಟೆಂಡರ್‌ ನೀಡಬಾರದು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಇಇ ಅವರಿಗೆ ಸಂಘಟನೆಗಳ ಪ್ರಮುಖರು ಮನವಿ ಸಲ್ಲಿಸಿದ್ದಾರೆ.

ಶ್ರೀಪಾದ ನಾಯ್ಕ ಶಂಕರ ಗುನಗಿ, ಶಬ್ಬೀರ್‌ ಶೇಖ್‌ ರಮಾಕಾಂತ ಗುನಗಿ, ಸಾಹೀದ್‌ ಖಾನ್‌, ರಾಘು ನಾಯ್ಕ, ವಿಜಯಕುಮಾರ ನಾಯ್ಕ ಶಬ್ಬೀರ್‌ ಶೇಖ್‌ ಇತರರು ಮನವಿ ಸಲ್ಲಿಕೆ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net