ಉಕ ಜಿಲ್ಲೆಯ ಮೂವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Teachers-award
Published on

ಕಾರವಾರ: ಜಿಲ್ಲೆಯ ಮೂವರು ಶಿಕ್ಷಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶನಿವಾರ ಪ್ರಶಸ್ತಿ ಪ್ರಕಟಿಸಿದೆ.

ಸೆ.5 ರಂದು ಬೆಂಗಳೂರಿನಲ್ಲಿ ಜರುಗುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರಿಗೆ ತಲಾ 25 ಸಾವಿರ ರೂ.ಗಳೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಹಿಳಾ ಶಿಕ್ಷಕರಿಗೆ ಜ್ಯೋತಿ ಬಾಫುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಇಲಾಖೆ ಪ್ರಕಟಿಸಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಜೊಯಿಡಾ ಅಣಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಹೊನ್ನಾವರ ಬೀರಂಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ಹರಿಕಂತ್ರ ಅವರಿಗೆ ಪ್ರಶಸ್ತಿ ಲಭಿಸಿದೆ.

ಪ್ರೌಢಶಾಲಾ ವಿಭಾಗದಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಹೊನ್ನಾವರ ಮಂಕಿ ಚಿತ್ತಾರ ಪ್ರೌಢಶಾಲೆಯ ಆಂಗ್ಲ ಶಿಕ್ಷಕ ಪ್ರಕಾಶ ನಾಯ್ಕ ಅವರಿಗೆ ಲಭಿಸಿದೆ.

ಇದನ್ನೂ ಓದಿ:
ಅಕ್ಷತಾ ಕೃಷ್ಣಮೂರ್ತಿ ಅವರು ಪಾಠದ ಜತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಅವರು ಕನ್ನಡ ಪಾಕ್ಷಿಕವೊಂದರಲ್ಲಿ ಬರೆಯುವ `ಇಸ್ಕೂಲು' ಅಂಕಣ ಪ್ರಸಿದ್ಧವಾಗಿದೆ. ಜಾನಪದ ಕೋಗಿಲೆ, ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಅವರ ಬಗ್ಗೆ ಅಧ್ಯಯನ ಗ್ರಂಥ ಪ್ರಕಟಿಸಿದ್ದಾರೆ. ಸಾಕಷ್ಟು, ಪುಸ್ತಕಗಳನ್ನು ಬರೆದಿದ್ದಾರೆ.
ಮಂಜುನಾಥ ಹರಿಕಾಂತ ಅವರು ತಾಳಮದ್ದಳೆ ಅರ್ಥಧಾರಿಯಾಗಿದ್ದಾರೆ. ಯಕ್ಷಗಾನ ಪಾತ್ರಧಾರಿಯಾಗಿದ್ದಾರೆ. ಖ್ಯಾತ ಯಕ್ಷಗಾನ ಕಲಾವಿದ ಜಲವಳ್ಳಿ ಅಭಿನಂದನಾ ಗ್ರಂಥ ರಚಿಸಿದ್ದಾರೆ.

ಅಲ್ಲದೆ, ಸಾಕಷ್ಟು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದು, ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲೂ ವಿನೂತನ ಬದಲಾವಣೆ ತಂದಿದ್ದಾರೆ.

ಪ್ರಕಾಶ ನಾಯ್ಕ ಮಕ್ಕಳ ನಾಟಕಗಳನ್ನು ಬರೆದಿದ್ದಾರೆ. ಸೃಜನಾ ರಂಗಭೂಮಿ ಎಂಬ ತಂಡ ಕಟ್ಟಿಕೊಂಡು ಆಸಕ್ತ ಮಕ್ಕಳಿಗೆ ರಂಗ ಪರಿಕರ, ರಂಗ ಸಜ್ಜಿಕೆ ತಯಾರಿಕೆ ತರಬೇತಿ ನೀಡುತ್ತಿದ್ದರು.

ಅವರು ರಚಿಸಿ ನಿರ್ದೇಶಿಸಿದ ರೂಪಕ ಪರಿಸರ ಜಾಗೃತಿ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದು, ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗೊಂಡಿದೆ. ಅಲ್ಲದೆ, ಶೈಕ್ಷಣಿಕವಾಗಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಮಕ್ಕಳ ಕಲಿಕೆಗೆ ವಿನೂತನ ಕಾರ್ಯಕ್ರಮ ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net