ಪಾವಗಡ ಯೋಜನೆಗೆ ಕೂಡ್ಲಿಗಿ ಸೇರಿಸಿ: ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಒತ್ತಾಯ

dr nt srinivas mla kudlagi
Published on

ಕೂಡ್ಲಿಗಿ: ಪಾವಗಡ ಮತ್ತು ಬಹುಗ್ರಾಮ ಕುಡಿವ ನೀರು ಸರಬರಾಜು ಯೋಜನೆಯಡಿ ಕೂಡ್ಲಿಗಿ ಪಟ್ಟಣ ಕೈಬಿಟ್ಟಿರುವುದು ಸರಿಯಲ್ಲ. ಯೋಜನೆಗೆ ಮರು ಸೇರ್ಪಡೆ ಮಾಡಬೇಕು ಎಂದು ಸಚಿವ ಜಮೀರ್ ಅವರನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಒತ್ತಾಯಿಸಿದರು.

ಶಿವಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೀರು ಶುದ್ಧೀಕರಣ ಘಟಕ ವೀಕ್ಷಣೆ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕರು, ಕೂಡ್ಲಿಗಿ ಪಟ್ಟಣಕ್ಕೆ ಬನ್ನಿಗೋಳ ಜಾಕ್‌ವೆಲ್‌ನಿಂದ ಪಟ್ಟಣಕ್ಕೆ ನಿತ್ಯ 30ಲಕ್ಷ ಲೀಟರ್ ಮಾತ್ರ ಪೂರೈಕೆ ಆಗುತ್ತಿದೆ. ಈಗಿನ ಜನಸಂಖ್ಯೆ ಆಧಾರದಲ್ಲಿ 50 ಲಕ್ಷ ಲೀಟರ್ ಅವಶ್ಯಕತೆ ಇದೆ. ಆದ್ದರಿಂದ ಪಾವಗಡ ಯೋಜನೆಯಡಿ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಸಚಿವ ಜಮೀರ್ ಪ್ರತಿಕ್ರಿಯಿಸಿ, ಇದಕ್ಕೆ ಪೂರಕವಾಗಿ ಏನು ಮಾಡಬೇಕು ಎಂಬುದರ ಕುರಿತು ಇಂಜಿನಿಯರ್ ಹಾಗೂ ಡಿಸಿ ಕ್ರಮವಹಿಸಲಿದ್ದಾರೆ. ಈ ಸಂಬಂಧ ಸಿಎಂ ಜತೆಯೂ ಚರ್ಚಿಸುವುದಾಗಿ ತಿಳಿಸಿದರು. ಪಟ್ಟಣಕ್ಕೆ ಅಗತ್ಯ ಇರುವ 5.50 ಎಂಎಲ್‌ಡಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಹಾಸಿಗೆ ನೀಡದೆ ಬೆಡ್‌ಶೀಟ್ ಮೇಲೆ ಮಲಗಿಸಿರುವುದು ಕಂಡು ಸಿಡಿಮಿಡಿಗೊಂಡರು.

ವಾರ್ಡನ್ ಗುರುರಾಜ್ ಅವರನ್ನು ಅಮಾನತು ಮಾಡುವಂತೆ ಡಿಸಿಗೆ ಸೂಚಿಸಿದರು. ಸ್ಥಳಕ್ಕೆ ಆಗಮಿಸದ ತಾಲೂಕು ವಿಸ್ತರಣಾಧಿಕಾರಿ ಸುದೀಪ್ ವಿರುದ್ಧವೂ ಕ್ರಮಕೈಗೊಳ್ಳಲು ತಿಳಿಸಿದರು. ತದನಂತರ ಹಳೇ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಜಾಗ ಪರಿಶೀಲನೆ ನಡೆಸಿದರು.

ಹೊಸದಾಗಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಹಾಗೂ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಹೆಚ್ಚುವರಿ ಕೊಠಡಿ ನಿರ್ಮಾಣ, ಉಪನ್ಯಾಸಕರ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬಯೋಮೆಟ್ರಿಕ್ ಕಡ್ಡಾಯ

ಜಿಲ್ಲೆಯ ಎಲ್ಲ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಹಾಜರಾತಿ ಖಾತ್ರಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಲು ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದರು. ವಿದ್ಯಾರ್ಥಿಗಳಿಗೆ ಸೌಲಭ್ಯಗಳ ಕೊರತೆಯಾದರೆ ಸಹಿಸುವುದಿಲ್ಲ. ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net