

ಜಯತೀರ್ಥ ಪಾಟೀಲ ಕಲಬುರಗಿ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ)ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಗಲಲ್ಲಿ ಮಾತ್ರ ಸೀಮಿತವಾಗಿದ್ದ ವಿಮಾನಯಾನ ಸೇವೆ ಇನ್ಮುಂದೆ ಸೂಯರ್ಾಸ್ತದ ನಂತರವೂ ಸಿಗಲಿದೆ. ಇದರೊಂದಿಗೆ ಕಲ್ಯಾಣ ಕರ್ನಾಟಕದ ವ್ಯಾಪಾರ-ವಹಿವಾಟು ಸುಧಾರಣೆ ಜತೆಗೆ ಹೊಸ ಹೊಸ ಕೈಗಾರಿಕೆಗಳನ್ನು ಇತ್ತ ಆಕರ್ಷಿಸಲು ಪೂರಕ ವಾತಾವರಣ ಸೃಷ್ಟಿಸುವ ನಿರೀಕ್ಷೆ ಮೂಡಿದೆ.
ಇಲ್ಲಿನ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಇದೆ. ಇದರ ಮಧ್ಯೆ ನೈಟ್ ಲ್ಯಾಂಡಿಂಗ್ ಸೌಲಭ್ಯ ಸಿಕ್ಕಿದೆ. ಇಲ್ಲಿಂದ ಹೊಸ ಹೊಸ ಏರ್ಲೈನ್ಸ್ ಸೇವೆ ಪ್ರಾರಂಭಿಸಲು ಆಪರೇಟರ್ಗಳಿಗೆ ಉತ್ತಮ ಅವಕಾಶ ಕಲ್ಪಿಸಿದೆ. ವಿಮಾನ ನಿಲ್ದಾಣದ ರನ್ವೇ-27ರ ಮೂಲಕ ಆಪರೇಟ್ ಮಾಡಲು ಡಿಜಿಸಿಎ ಸಮ್ಮತಿ ಸೂಚಿಸಿದ್ದಾರೆ. ವಿಮಾನ ಹಾರಾಟದ ಬಹುತೇಕ ಪ್ರಕ್ರಿಯೆ ರನ್ವೇ-27ರಲ್ಲಿ ನಡೆಯುತ್ತಿದೆ.
ನೈಟ್ ಲ್ಯಾಂಡಿಂಗ್ ಸೌಲಭ್ಯದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ದಿನದ 24 ತಾಸು ವಿಮಾನ ಹಾರಾಟ ನಡೆಯಲಿದೆ. ನವದೆಹಲಿ, ಮುಂಬೈ, ಹೈದರಾಬಾದ್ ಸೇರಿ ಪ್ರಮುಖ ವಾಣಿಜ್ಯ ನಗರಗಳಿಗೆ ಲಿಂಕ್ ಸಿಗಲಿದ್ದು, ವಾಣಿಜ್ಯ, ವ್ಯಾಪಾರ ವೃದ್ಧಿಗೆ ಅನುಕೂಲವಾಗಲಿದೆ. ಏರ್ ಆಂಬುಲೆನ್ಸ್ ದಿನದ 24 ತಾಸು ಕಾರ್ಯನಿರ್ವಹಣೆ ಮಾಡಬಹುದಾಗಿದೆ.
ಸಿಮೆಂಟ್ ಹೊರತುಪಡಿಸಿದರೆ ಈ ಭಾಗದಲ್ಲಿ ಹೇಳಿಕೊಳ್ಳುವಂಥ ಕೈಗಾರಿಕೆಗಳಿಲ್ಲ. ಇತ್ತೀಚೆಗೆ ಟೆಕ್ಸ್ಟೈಲ್ ಪಾರ್ಕ್ ಘೋಷಣೆಯಾಗಿದೆ. ಈ ಪಾರ್ಕ್ನಲ್ಲಿ ತೊಡಗಿಸಿಕೊಳ್ಳುವ ಉದ್ಯಮಿಗಳಿಗೂ ಪ್ಲಸ್ ಆಗಲಿದ್ದು, ಉದ್ಯೋಗ ಅವಕಾಶವೂ ಸಿಗಲಿದೆ. ದಿನದ 24 ಗಂಟೆ ವಿಮಾನ ಸೌಲಭ್ಯ ದೊರೆಯುವುದರಿಂದಾಗಿ ಹೊಸ ಹೂಡಿಕೆದಾರರು ಮುಂದೆ ಬಂದರೆ ಕೈಗಾರಿಕೆಗಳಿಗೆ ಉತ್ತೇಜನ ಸಿಗಬಹುದು.
ಕಾರ್ಗೋ ಸೇವೆ ಸಾಧ್ಯತೆ: ಸರಕು ಸಾಗಣೆ ಪ್ರಕ್ರಿಯೆ ಬಹುತೇಕ ರಾತ್ರಿ ವೇಳೆ ನಡೆಯುತ್ತದೆ. ಹೀಗಾಗಿ ನೈಟ್ ಲ್ಯಾಂಡಿಂಗ್ ಸೌಲಭ್ಯದಿಂದ ಕಾರ್ಗೋ ಸೇವೆಯೂ ಅತಿ ಶೀಘ್ರ ಪ್ರಾರಂಭವಾಗುವ ಸಾಧ್ಯತೆಗಳಿವೆೆ. ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ, ದ್ರಾಕ್ಷಿ, ಬ್ಯಾಡಗಿ ಮೆಣಸಿನಕಾಯಿ ಸೇರಿ ಈ ಭಾಗದ ಪ್ರಮುಖ ಉತ್ಪನ್ನಗಳ ರಫ್ತಿಗೆ ಅನುಕೂಲ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಗೂ ಅವಕಾಶ ದೊರೆಯಲಿದೆ. ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿದ್ದರೂ ಮಾರುಕಟ್ಟೆ ಸೌಲಭ್ಯದ ಕೊರತೆ ಇದೆ. ಕಲಬುರಗಿಯ ತೊಗರಿ ಜಾಗತಿಕ ಮಾನ್ಯತೆ ಹೊಂದಿದೆ. ಆದರೆ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಬ್ಯಾಡಗಿ ಮೆಣಸಿನಕಾಯಿ ದೇಶ, ವಿದೇಶಗಳಲ್ಲಿ ಫೇಮಸ್ಸು. ಹೀಗೆ ಹತ್ತಾರು ಉತ್ನನ್ನಗಳನ್ನು ಹೊರದೇಶಕ್ಕೆ ರವಾನಿಸಲು ನೈಟ್ ಲ್ಯಾಂಡಿಂಗ್ ಪೂರಕ ವಾತಾವರಣ ಸೃಷ್ಟಿಸಲಿದೆ.
ಸೆಟ್ಲೈಟ್ ಸಿಟಿ: ಕಲಬುರಗಿ ಸೆಟ್ಲೈಟ್ ಸಿಟಿಯಾಗಿ ಘೋಷಿಸಬೇಕೆಂಬುದು ಬಹುದಿನಗಳ ಬೇಡಿಕೆ. ಹಾಗೊಂದು ವೇಳೆ ಇದು ಕೈಗೂಡಿದರೆ ವಿಮಾನ ಸೌಲಭ್ಯಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಲಿದೆ. ನೂತನ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಮುತವರ್ಜಿ ವಹಿಸುವ ಅಗತ್ಯವಿದೆ. ನೆರೆಯ ತೆಲಂಗಾಣದಲ್ಲಿ 63 ವಿಶೇಷ ಆರ್ಥಿಕ ವಲಯ (ಎಸ್ಇಝಡ್)ಗಳಿವೆ. ಕಲಬುರಗಿಯಲ್ಲಿ ನಿಮ್ಜ್ ಪ್ರಸ್ತಾವನೆ ಹಳ್ಳ ಹಿಡಿದಿದೆ. ಕಲಬುರಗಿ ಜತೆಗೆ ಪ್ರಸ್ತಾವನೆಯಲ್ಲಿದ್ದ ತುಮಕೂರು ಜಿಲ್ಲೆಯಲ್ಲಿ ನಿಮ್ಜ್ ಪ್ರಾರಂಭವಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಬೃಹತ್ ಯೋಜನೆಗಳು ಸಿಗುತ್ತಿಲ್ಲ. ಎಸ್ಇಝಡ್ನಂತಹ ಬೃಹತ್ ಪ್ರಾಜೆಕ್ಟ್ಗಳು ಕಲಬುರಗಿಗೆ ಬರಬೇಕಿವೆ. ಕಡಿಮೆ ಸಂಬಳದಲ್ಲಿ ಸ್ಕಿಲ್ ಸಿಬ್ಬಂದಿಯೂ ದೊರೆಯಲಿದೆ.
ವಿವಿಐಪಿಗಳಿಗೂ ಅನುಕೂಲ: ದೊಡ್ಡ ದೊಡ್ಡ ಉದ್ಯಮಿಗಳು, ಎಂಎನ್ಸಿಗಳು, ರಾಜಕಾರಣಿಗಳು, ವಿಐಪಿ, ವಿವಿಐಪಿಗಳಿಗೂ ನೈಟ್ ಲ್ಯಾಂಡಿಂಗ್ ಸೌಲಭ್ಯದಿಂದ ಪೂರಕವಾಗಲಿದೆ. ಈ ಸೌಲಭ್ಯ ಕೊರತೆಯಿಂದ ಎಷ್ಟೋ ಜನ ಪಕ್ಕದ ಬೀದರ್ಗೆ ಹೋಗಿ ಆ ಮೂಲಕ ಬೇರೆ, ಬೇರೆ ನಗರಗಳಿಗೆ ಹೋಗುತ್ತಿರುವ ಉದಾಹರಣೆಗಳಿವೆ. ರಾಜ್ಯ/ಕೇಂದ್ರದ ಹಿರಿಯ ಅಧಿಕಾರಿಗಳು ಆಗಾಗ್ಗೆ ಬಂದು ಮಹತ್ವದ ಸಭೆ ನಡೆಸಬಹುದು. ಸೌಲಭ್ಯ ಇಲ್ಲದ್ದದರಿಂದ ಈಗಿರುವ ದಿನದ ವಿಮಾನ ಸೌಲಭ್ಯದಿಂದ ತರಾತುರಿಯಲ್ಲಿ ಹೋಗುವ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ.