More

    ಜಾತಿ ಸಮೀಕರಣದಿಂದ ಕೈತಪ್ಪುತ್ತಾ ಸಚಿವ ಸ್ಥಾನ ?

    ಶಿವಮೂರ್ತಿ ಹಿರೇಮಠ ರಾಯಚೂರು

    ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜಿಲ್ಲೆಗೆ ಸಚಿವ ಸ್ಥಾನ ನೀಡುವಲ್ಲಿ ಕಡೆಗಣಿಸಲಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರದಿಂದ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಜನಪ್ರಿಯತೆ, ಜಾತಿ ಬಲವೇ ಮಾನದಂಡ

    ಜಿಲ್ಲೆಯಿಂದ ನಾಲ್ವರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಯಾರಿಗಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ರಾಜಕೀಯ ವಲಯದಲ್ಲಿದೆ.

    ಸಿಂಧನೂರಿನಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಹಂಪನಗೌಡ ಬಾದರ್ಲಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಸ್ಟಿ ಸಮುದಾಯಕ್ಕೆ ಸೇರಿದ ಮೂವರ ಪೈಕಿ ಮಾನ್ವಿಯಿಂದ ಹಂಪಯ್ಯ ನಾಯಕ 3ನೇ ಬಾರಿಗೆ, ರಾಯಚೂರು ಗ್ರಾಮೀಣದಿಂದ ಬಸನಗೌಡ ದದ್ದಲ್ ಹಾಗೂ ಮಸ್ಕಿಯಲ್ಲಿ ಬಸನಗೌಡ ತುರ್ವಿಹಾಳ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ನಾಲ್ವರ ಪೈಕಿ ಮೂವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಆಪ್ತರಾಗಿದ್ದಾರೆ.

    ಕಾಂಗ್ರೆಸ್‌ನಿಂದ 35ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಶಾಸಕರು ಆಯ್ಕೆಯಾಗಿದ್ದು, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಎಚ್.ಕೆ.ಪಾಟೀಲ್, ಲಕ್ಷ್ಮಣ ಸವದಿ, ಬಿ.ಆರ್.ಪಾಟೀಲಗೆ ಸಚಿವ ಸ್ಥಾನ ನೀಡುವ ಅವಕಾಶಗಳು ಹೆಚ್ಚಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಪ್ತರಾಗಿರುವ ಶರಣಪ್ರಕಾಶ ಪಾಟೀಲ್ ಹಾಗೂ ಶರಣಬಸಪ್ಪ ದರ್ಶನಾಪುರ ಕೂಡಾ ರೇಸ್‌ನಲ್ಲಿದ್ದಾರೆ.

    ಐದನೇ ಬಾರಿಗೆ ಶಾಸಕರಾಗುವ ಮೂಲಕ ಹಿರಿತನ ಹೊಂದಿರುವ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಇದೆ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಹಂಪನಗೌಡಗೆ ಸಚಿವ ಸ್ಥಾನ ಕೈತಪ್ಪಿತ್ತು. ಹೀಗಾಗಿ ಈ ಬಾರಿಯಾದರೂ ನೀಡುತ್ತಾರೆಯೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

    ನಾಯಕ ಸಮುದಾಯಕ್ಕೆ ಸೇರಿದ 15 ಶಾಸಕರು ಆಯ್ಕೆಯಾಗಿದ್ದು, ಸತೀಶ ಜಾರಕಿಹೊಳಿ, ಖರ್ಗೆ ಆಪ್ತ ರಾಜಾ ವೆಂಕಟಪ್ಪ ನಾಯಕ ಸೇರಿ ಅನೇಕ ಘಟಾನುಘಟಿ ನಾಯಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಜಿಲ್ಲೆಯ ನಾಯಕ ಸಮುದಾಯಕ್ಕೆ ಸೇರಿದ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಹಂಪಯ್ಯ ನಾಯಕ ಮತ್ತು ಬಸನಗೌಡ ತುರ್ವಿಹಾಳಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಅಂದಾಜಿಸಲಾಗುತ್ತಿದೆ.

    ಹೊರಗಿನವರ ಉಸ್ತುವಾರಿ

    ಸ್ಥಳೀಯರ ಪೈಕಿ 2000-04 ರವರೆಗೆ ರಾಜಾ ಅಮರೇಶ್ವರ ನಾಯಕ, 2004-06 ರವರೆಗೆ ಅಮರೇಗೌಡ ಬಯ್ಯಪುರ, 2006-08ರವರೆಗೆ ಹನುಮಂತಪ್ಪ ಆಲ್ಕೋಡ, 2018-19ರವರೆಗೆ ವೆಂಕಟರಾವ್ ನಾಡಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2008-2011ರವರೆಗೆ ಕೆ.ಶಿವನಗೌಡ ನಾಯಕ ಸಚಿವರಾಗಿದ್ದರೂ ಜಿಲ್ಲಾ ಉಸ್ತುವಾರಿ ನೀಡಿರಲಿಲ್ಲ.

    ಹಲವು ವರ್ಷಗಳಿಂದ ಹೊರ ಜಿಲ್ಲೆಯವರನ್ನೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೊರಜಿಲ್ಲೆಯವರೇ ಉಸ್ತುವಾರಿಗಳಾಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಜಿಲ್ಲೆಗೆ ಸಚಿವ ಸ್ಥಾನವನ್ನೂ ನೀಡಿರಲಿಲ್ಲ.

    ಪಕ್ಷದಲ್ಲಿ ಕಾಲೆಳೆಯುವ ತಂತ್ರ

    ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಿಂಧನೂರಿನ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಕೈತಪ್ಪುವಲ್ಲಿ ಜಿಲ್ಲೆಯಲ್ಲಿನ ಪಕ್ಷದ ಪ್ರಭಾವಿ ನಾಯಕರು ಅಡ್ಡಿಯಾಗಿದ್ದರು.

    ಈ ಬಾರಿಯೂ ಬಾದರ್ಲಿಗೆ ಸಚಿವ ಸ್ಥಾನ ಸಿಗಲು ಮತ್ತೊಂದು ಬಣ ಬಿಡುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಬಸನಗೌಡ ದದ್ದಲ್‌ಗೂ ಸಚಿವ ಸ್ಥಾನ ಸಿಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪಕ್ಷದಲ್ಲಿ ಈಗಾಗಲೇ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

    ಈ ಬಾರಿ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಐದನೇ ಬಾರಿಗೆ ಶಾಸಕನಾಗಿರುವುದರಿಂದ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ದೊರೆಯುವ ಆಶಾಭಾವವಿದೆ. ಆದರೆ, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.
    | ಹಂಪನಗೌಡ ಬಾದರ್ಲಿ ಶಾಸಕ, ಸಿಂಧನೂರು

    ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದನ್ನು ಪಕ್ಷದ ವರಿಷ್ಠರು ಮತ್ತು ಸಿಎಂ ನಿರ್ಧರಿಸುತ್ತಾರೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಸಚಿವ ಸ್ಥಾನ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
    | ಬಸನಗೌಡ ದದ್ದಲ್, ಶಾಸಕ, ರಾಯಚೂರು ಗ್ರಾಮೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts