More

  ಜನಪ್ರಿಯತೆ, ಜಾತಿ ಬಲವೇ ಮಾನದಂಡ

  ಹುಣಸೂರು: ನಗರಸಭೆ ಚುನಾವಣೆಗೆ ಆಕಾಂಕ್ಷಿಯ ಜನಪ್ರಿಯತೆ, ಆರ್ಥಿಕ ಬಲ ಮತ್ತು ಜಾತಿ ಸಮೀಕರಣಗಳ ಆಧಾರದಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

  ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಫೆ.9ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಗುರುವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಆಕಾಂಕ್ಷಿಗಳ ಸಭೆಯಲ್ಲಿ ಅವರು ಮಾತನಾಡಿದರು.

  31 ವಾರ್ಡ್‌ಗಳಿಗಾಗಿ ಈವರೆಗೆ ಒಟ್ಟು 91 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಆಯ್ಕೆ ಪ್ರಕ್ರಿಯೆ ಸಮಸ್ಯೆಯಾಗಿದೆ. ಪಟ್ಟಣದ ನಾಗರಿಕರು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ನಗರಸಭೆಯನ್ನು ನೀಡಿದಲ್ಲಿ ನಗರಸಭೆಯ ಚಿತ್ರಣ ಬದಲಾಯಿಸಲಾಗುವುದು. ತಾಲೂಕಿನ ಮತ್ತು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಾಗಿ ನಾಗರಿಕರು ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕಿದೆ ಎಂದು ಕೋರಿದರು.

  ಹಣ, ಜನಪ್ರಿಯತೆ ಮುಖ್ಯ: ಚುನಾವಣೆ ಈಗ ಹಿಂದಿನಂತಿಲ್ಲ. ಪ್ರತಿವಾರ್ಡ್‌ನಲ್ಲಿ ಅರ್ಹ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇದಕ್ಕಾಗಿ ಅಭ್ಯರ್ಥಿ ಹಣವುಳ್ಳವನು, ಆ ಭಾಗದಲ್ಲಿ ಜನಪ್ರಿಯತೆಯನ್ನೂ ಹೊಂದಿರುವುದು ಅವಶ್ಯ. ಜಾತಿ ಸಮೀಕರಣ ಇತ್ಯಾದಿ ಆಧಾರದಡಿ ಆಯ್ಕೆ ಮಾಡಲಾಗುವುದು. ಪಕ್ಷದಿಂದ ಯಾವುದೇ ಆರ್ಥಿಕ ನೆರವು ಸಿಗುವುದಿಲ್ಲ. ಪ್ರತಿ ವಾರ್ಡ್‌ಗೂ 5 ಸಾವಿರ ಕರಪತ್ರಗಳನ್ನು ಮುದ್ರಿಸಿ ಕೊಡಲಾಗುವುದು. ನಾನು ವೈಯಕ್ತಿಕವಾಗಿ ಪ್ರತಿವಾರ್ಡ್ ಅಭ್ಯರ್ಥಿಗೆ ತಲಾ ಒಂದು ಲಕ್ಷ ರೂ. ನೆರವು ನೀಡಲಿದ್ದೇನೆ ಎಂದು ಭರವಸೆ ನೀಡಿ, ಪ್ರತಿವಾರ್ಡ್‌ಗೆ ಪಕ್ಷದ ನಿಷ್ಠಾವಂತ 10 ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮನೆಮನೆಗೆ ತೆರಳಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದರು.

  ಹೊಣೆ ಪಕ್ಷದ್ದಾಗುವುದಿಲ್ಲ: ಚುನಾವಣಾ ಫಲಿತಾಂಶದಲ್ಲಿ ಏರುಪೇರಾದರೆ ನಾನಾಗಲಿ, ಪಕ್ಷವಾಗಲಿ ಹೊಣೆಯಲ್ಲ. ಯಾವುದೇ ಅಭ್ಯರ್ಥಿ ಬಲವಂತದಿಂದ ಸ್ಪರ್ಧಿಸುವುದು ಬೇಡ. ಟಿಕೆಟ್ ಸಿಗಲಿಲ್ಲವೆಂದು ಪಕ್ಷವಿರೋಧಿಯಾಗಿ ಸ್ಪರ್ಧಿಸುವುದು ಬೇಡ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಕ್ಕೆ ನಗರಸಭೆಯ ಅಧಿಕಾರ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಿಗಳು ಪಕ್ಷದ ನಿರ್ಣಯಗಳಿಗೆ ತಲೆಬಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಕೋರಿದರು.

  ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಪಕ್ಷವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಹಾಗೂ ಪಕ್ಷದ ಅಧಿಕೃತ ಸದಸ್ಯರಲ್ಲದವರಿಗೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ನೀಡುವ ನಿಟ್ಟಿನಲ್ಲಿ 10 ಸದಸ್ಯರನ್ನೊಳಗೊಂಡ ಸ್ಕ್ರೀನಿಂಗ್ ಸಮಿತಿ ರಚಿಸಲಾಗುವುದು. ಚುನಾವಣೆ ಉಸ್ತುವಾರಿಯನ್ನು ಪಕ್ಷದ ಹಿರಿಯ ಮುಖಂಡರಾದ ಅಶ್ವಿನ್‌ಕುಮಾರ್ ರೈ ಅವರ ಹೆಗಲಿಗೆ ಪಕ್ಷ ಹೊರಿಸಿದೆ. ಜ.27ರಂದು ಪಕ್ಷದ ಅಭ್ಯರ್ಥಿಗಳ ಆಯ್ಕೆ ನಡೆಸಿ ಬಿ-ಫಾರಂ ನೀಡಲಾಗುವುದು. ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿ ಗೆಲ್ಲೋಣವೆಂದರು.

  ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ನಗರಾಧ್ಯಕ್ಷ ಶಿವಯ್ಯ, ಮುಖಂಡ ಹಂದನಹಳ್ಳಿ ಸೋಮಶೇಖರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts