ಜನಮತ ಸರ್ವಹಿತ; ಜನಪ್ರಿಯತೆ ಆದ್ಯತೆ ತಗ್ಗೀತೇ ವಿತ್ತೀಯ ಕೊರತೆ? ವಿವಿಧ ಚುನಾವಣೆ ನಿರೀಕ್ಷೆಗಳ ಆಯವ್ಯಯ

fg
Published on

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿ ಎದುರಾಗಲಿರುವ ಸಾಲುಸಾಲು ಚುನಾವಣೆ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ ತಮ್ಮ ಚೊಚ್ಚಲ ಆಯವ್ಯಯ ಮಂಡಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ, ಜನಪ್ರಿಯತೆಯ ಜತೆಗೆ ರಾಜಸ್ವ ಹೆಚ್ಚಳದ ಮೂಲಕ ವಿತ್ತೀಯ ಶಿಸ್ತು ಕಾಪಾಡಲು ಮಾಡುವ ಕಸರತ್ತುಗಳೇನೆಂಬುದು ಕುತೂಹಲಕ್ಕೆ ಎಡೆ ಮಾಡಿದೆ. ಮುಂದಿನ ವರ್ಷ ಏಪ್ರಿಲ್-ಮೇನಲ್ಲಿ ವಿಧಾನಸಭೆ, ಅದಕ್ಕೂ ಮೊದಲೇ ಜಿಪಂ-ತಾಪಂ ಹಾಗೂ ಬಿಬಿಎಂಪಿಗೆ ಚುನಾವಣೆ ನಡೆಯಬೇಕಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದುರುಳಿಸುವ ತಂತ್ರಗಾರಿಕೆಯನ್ನು ಬೊಮ್ಮಾಯಿ ಮೆರೆಯುವ ಸಾಧ್ಯತೆ ಇದೆ.

ಹಳೆಯದು ಪೂರ್ಣ: ಬೊಮ್ಮಾಯಿ ಈವರೆಗೆ ಎಲ್ಲಿಯೂ ಬಜೆಟ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಯಾವ ದಾರಿಯಲ್ಲಿರಲಿದೆ ಎಂಬುದನ್ನು ಮಾತ್ರ ಸೂಕ್ಷ್ಮವಾಗಿ ಹೇಳಿದ್ದಾರೆ. ಮಹಿಳೆಯರು, ರೈತರು, ಕಾರ್ವಿುಕರು, ನೀರಾವರಿ, ಉದ್ಯೋಗದ ಅವಕಾಶಗಳ ಸೃಷ್ಟಿ ತಮ್ಮ ಆದ್ಯತೆ ಎಂದು ಹೇಳಿದ್ದಾರೆ. ಹೊಸ ಯೋಜನೆಗಳನ್ನು ಘೋಷಣೆ ಮಾಡಿ ಅರ್ಧಕ್ಕೆ ಕೈ ಬಿಡುವುದಕ್ಕಿಂತ ಇತಿಮಿತಿಯಲ್ಲಿ ಜಾರಿಗೊಳಿಸಲು ಸಾಧ್ಯ ಇರುವ ಕಾರ್ಯಕ್ರಮಗಳನ್ನು ಮಾತ್ರ ಪ್ರಕಟಿಸುವ ಕಡೆ ಹೆಚ್ಚು ಆಸಕ್ತರಾಗಿದ್ದಾರೆ. ಅಭಿವೃದ್ಧಿ ಯೋಜನೆಗಳಲ್ಲಿ ಅರ್ಧಕ್ಕೆ ನಿಂತಿರುವವನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದಾರೆ.

ಸವಾಲುಗಳ ರಾಶಿ: ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಅನಿವಾರ್ಯತೆಯಲ್ಲಿರುವ ಬೊಮ್ಮಾಯಿ ಅವರಿಗೆ ಸವಾಲಿನ ರಾಶಿಗಳೇ ಎದುರಿಗಿವೆ. ಸಾಲದ ಪ್ರಮಾಣ ತಗ್ಗಿಸುವ ಮೂಲಕ ವಿತ್ತೀಯ ಕೊರತೆ ತಗ್ಗಿಸುವ, ರಾಜಸ್ವ ಉಳಿತಾಯ ಸಾಧಿಸಲು ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಬರೀ ಬಡ್ಡಿ ಪಾವತಿಯೇ ಆಗಿ, ಅಭಿವೃದ್ಧಿಗೆ ಸಾಲ ಮಾಡುತ್ತ ಸಾಗಬೇಕಾಗುತ್ತದೆ. ಪ್ರಸಕ್ತ ಸಾಲಿನ ಬಜೆಟ್​ನ ಗಾತ್ರ 2.46 ಲಕ್ಷ ಕೋಟಿ ರೂ.ಗಳಿದ್ದರೂ ಬಡ್ಡಿ ಹಾಗೂ ಅಸಲು ಪಾವತಿಗೆ 43 ಸಾವಿರ ಕೋಟಿ ರೂ. ಪಾವತಿಸಬೇಕಾದ ದುಸ್ಥಿತಿ ಇದೆ. ಮುಂದಿನ ವರ್ಷಕ್ಕೆ 50 ಸಾವಿರ ಕೋಟಿ ರೂ.ದಾಟುತ್ತದೆ. ಇದರ ಜತೆಗೆ ಬದ್ಧ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಈ ವರ್ಷ ನೌಕರರ ವೇತನ ಪರಿಷ್ಕರಣೆಯಾದರೆ ಸುಮಾರು 10 ಸಾವಿರ ಕೋಟಿ ರೂ. ದೊಡ್ಡ ಹೊರೆ ಹೊರಬೇಕಾಗುತ್ತದೆ.

ಒಂದು ಬಾಣ ಮೂರು ಗುರಿ:

1. ಜನಪ್ರಿಯ ಯೋಜನೆಗಳ ಮೂಲಕ ಜನರ ಗಮನ ಸೆಳೆಯುವುದು

2. ತನ್ನ ಅಸ್ತಿತ್ವ ಗಟ್ಟಿ ಮಾಡಿಕೊಳ್ಳುವುದು

3. ಪಕ್ಷದ ಮತಬ್ಯಾಂಕ್ ಚದುರದಂತೆ ನೋಡಿಕೊಳ್ಳುವುದು

ಸ್ವಂತ ತೆರಿಗೆಗೆ ಬರವಿಲ್ಲ: ರಾಜ್ಯದಲ್ಲಿ ಸಂಗ್ರಹವಾಗುವ ಸ್ವಂತ ತೆರಿಗೆಗೆ ಬರವಿಲ್ಲ. ಸುಮಾರು 20 ಸಾವಿರ ಕೋಟಿ ರೂ. ಹೆಚ್ಚಾಗಿಯೇ ಸಂಗ್ರಹವಾಗುವ ನಿರೀಕ್ಷೆ ಇದೆ. ಆದರೆ ಕೇಂದ್ರದ ಪಾಲು ಸರಿಯಾಗಿ ಸಿಗದೇ ಇರುವುದೇ ಸಮಸ್ಯೆಯಾಗಿದೆ.

ಅಡಕತ್ತರಿಯಲ್ಲಿ ಸಿಎಂ: ಮುಂದಿನ ವರ್ಷದಿಂದ ಜಿಎಸ್​ಟಿ ಪರಿಹಾರ ನಿಂತು ಹೋಗುತ್ತದೆ. ಬೊಮ್ಮಾಯಿ ಈ ಕೊರತೆಯನ್ನು ಎಲ್ಲಿಂದ, ಹೇಗೆ ತುಂಬಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಾಗಿದೆ. ಅತ್ತ ತೆರಿಗೆ ಹಾಕಲು ಯಾವುದೇ ಅವಕಾಶವೂ ಇಲ್ಲದ, ಇತ್ತ ಕೇಂದ್ರದ ಸಹಕಾರವೂ ಇಲ್ಲದ, ಸಾಲದ ಹೊರೆಯೂ ಹೆಚ್ಚಾಗುವ ಅಡಕತ್ತರಿಯಲ್ಲಿ ಸಿಎಂ ಸಿಲುಕಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಮಾಡುವ ಹೆಚ್ಚುವರಿ ಸಾಲವೇ ವಿತ್ತೀಯ ಕೊರತೆಯಾಗಿದೆ. ವಿತ್ತಿಯ ಹೊಣೆಗಾರಿಕೆ ಕಾಯ್ದೆ ಪ್ರಕಾರ ಜಿಎಸ್​ಡಿಪಿಯ ಶೇ.3 ಮೀರುವಂತಿರಲಿಲ್ಲ. ಕರೊನಾ ಕಾರಣಕ್ಕೆ ಶೇ.2 ಹೆಚ್ಚಳ ಮಾಡಿದ್ದನ್ನು ಹಿಂದಕ್ಕೆ ಪಡೆದಿಲ್ಲ. ಆದ್ದರಿಂದಲೇ ವಿತ್ತೀಯ ಕೊರತೆ ಈಗ 59240 ಕೋಟಿ ರೂ.ಗಳಾಗಿದ್ದು ಶೇ.3.48 ಇದೆ. ಬೊಮ್ಮಾಯಿ ಬಜೆಟ್​ನಲ್ಲಿ ಈ ಪ್ರಮಾಣ ಶೇ. 4 ಮೀರಲಿದೆ. ರಾಜಸ್ವ ಯಾವತ್ತೂ ಉಳಿತಾಯ ಇರಬೇಕು. 2018ರಲ್ಲಿ ಶೇ.0,89 ರಷ್ಟು ಉಳಿತಾಯ ಇತ್ತು, ಆದರೆ ಈಗ ಅದು 15134 ಕೋಟಿ ರೂ. ಕೊರತೆಯಾಗಿದೆ. ಸಾಲದ ಪ್ರಮಾಣ ಜಿಎಸ್​ಡಿಪಿಯ ಶೇ.25 ದಾಟುವಂತಿರಲಿಲ್ಲ. ಆದರೆ ಈಗ ಶೇ.26.9 ಮುಟ್ಟಿದೆ. ಆದ್ದರಿಂದಲೇ ಜಿಎಸ್​ಡಿಪಿ ದರ ಕಡಿಮೆಯಾಗುತ್ತ ಬರುತ್ತಿದೆ. ಇಂತಹ ಸಂಕಷ್ಟದಲ್ಲಿ ಬೊಮ್ಮಾಯಿ ಯಾವ ರೀತಿ ಬಜೆಟ್ ಮಂಡಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಆತ್ಮಹತ್ಯೆ ಸವಾಲು: ರಾಜ್ಯದಲ್ಲಿಯೂ ನಿರುದ್ಯೋಗ, ಸಾಲ, ದಿವಾಳಿತನದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಸಿಎಂಗೆ ಸವಾಲಾಗಿದೆ. 2019ರಲ್ಲಿ 9881 ಜನ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ಸಂಖ್ಯೆ 2020ರಲ್ಲಿ 10,600ಕ್ಕೆ ಏರಿಕೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ 450ಕ್ಕೂ ಹೆಚ್ಚು ಜನ ಪದವೀಧರರು, ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಇರುವವರು. ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಶೇ.70 ಜನರ ವರಮಾನ 1 ಲಕ್ಷ ರೂ.ಗಳಿಗಿಂತ ಕಡಿಮೆ ಇದೆ. ಆತ್ಮಹತ್ಯೆಗೆ ಒಳಗಾದ ಶೇ.71 ಜನ ವಿವಾಹಿತರಾಗಿದ್ದು ಸಂಸಾರ ನಿಭಾಯಿಸಲಾಗದೆ ಸಾವಿನ ದಾರಿ ಕಂಡುಕೊಂಡಿದ್ದಾರೆ.

ಹೊಸದು ಏನೇನಿರುತ್ತದೆ?

  1.   ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯಕ್ಕೆ ಆರ್ಥಿಕ ಬಲ
  2.   75 ಸಾವಿರ ರೈತರಿಗೆ ಬಿತ್ತನೆ ಬೀಜದ ಕಿರು ಕಿಟ್ ವಿತರಣೆ
  3.  ಪ್ರಧಾನ ಮಂತ್ರಿ ಕೃಷಿ ಸಿಂಚಾಯಿದಲ್ಲಿ ಜಲಾನಯನಕ್ಕೆ ಆದ್ಯತೆ
  4.   ಮುಖ್ಯಮಂತ್ರಿ ಜಲನಿಧಿ
  5.   ಜಿಐ ಟ್ಯಾಗ್ ಪಡೆದಿರುವ ತೊಗರಿಗೆ ಬ್ರಾ್ಯಂಡಿಂಗ್, ಮಾರ್ಕೆಟಿಂಗ್
  6.  ಬಿಪಿಎಲ್ ಕಾರ್ಡ್​ಗೆ ಹೆಚ್ಚುವರಿ ಒಂದು ಕೆಜಿ ಅಕ್ಕಿ
  7.   ವಿದೇಶದಲ್ಲಿರುವ ತಜ್ಞರ ನೆರವು ಪಡೆಯಲು ಮರಳಿ ತಾಯ್ನಾಡಿಗೆ
  8.  ನೀರಾವರಿ ಯೋಜನೆಗಳನ್ನು ಮುಗಿಸಲು ಆದ್ಯತೆ
  9.   ಅಣೆಕಟ್ಟುಗಳ ಸುರಕ್ಷತೆಗೆ ಯೋಜನೆ
  10.  ಗತಿಶಕ್ತಿ ಯೋಜನೆಯಲ್ಲಿ ಸಾಲ ಪಡೆಯುವುದು
  11.   ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
  12.  ಮಹಿಳಾ ಸಬಲೀಕರಣಕ್ಕೆ ಒತ್ತು
  13.  ಸಣ್ಣ ವ್ಯಾಪಾರಿಗಳು, ಕಿರು ಉದ್ದಿಮೆಗಳಿಗೆ ಕೆಲವು ವಿನಾಯಿತಿ
  14.   ಅಭಿವೃದ್ಧಿಯೇತರ ವೆಚ್ಚ ತಗ್ಗಿಸಲು ಸಮಿತಿ ರಚನೆ
  15.  ಸರ್ಕಾರಿ ನೌಕರರ ವೇತನ ಆಯೋಗ ರಚನೆ
  16.  ಮೂಲಸೌಕರ್ಯ ಅಭಿವೃದ್ಧಿಗೆ ವಿವಿಧ ಸೆಸ್
  17.  ಬಿ ಖಾತಾ ಎ ಖಾತಾಕ್ಕೆ ವರ್ಗಾವಣೆ
  18.   ಅಮೃತ ಯೋಜನೆಗಳಿಗೆ ಹೆಚ್ಚಿನ ಹಣಕಾಸು ನೆರವು
  19.   ಬೆಂಗಳೂರಿನ ರಸ್ತೆ, ಮೆಟ್ರೋ, ನೀರಿಗೆ ಆದ್ಯತೆ
  20.   ವೃದ್ಧರು, ಕೃಷಿ ಕೂಲಿ ಕಾರ್ವಿುಕರಿಗೆ ಹೊಸ ಯೋಜನೆ
  21.   ಅಪೌಷ್ಠಿಕತೆ ತಗ್ಗಿಸಲು ಆದ್ಯತೆ
  22.   ನೋಂದಣಿ ಕಚೇರಿಗಳಲ್ಲಿ ಮೂಲಸೌಕರ್ಯ
  23.   ಜಿಎಸ್​ಟಿ ವ್ಯಾಪ್ತಿಗೆ ಹೆಚ್ಚು ವ್ಯಾಪಾರಿಗಳನ್ನು ತರಲು ಪ್ರಯತ್ನ
  24.   ಉದ್ಯೋಗಾವಕಾಶ ಹೆಚ್ಚಿಸುವ ಕಾರಿಡಾರ್ ಸೇರಿ ವಿವಿಧ ಯೋಜನೆಗಳಿಗೆ ಆದ್ಯತೆ

ಬರಬೇಕು 1.26 ಲಕ್ಷ ಕೋಟಿ: ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆ ಪೈಕಿ ಕೇಂದ್ರ ರಾಜ್ಯಕ್ಕೆ ಶೇ.42 ನೀಡಬೇಕು. ಆದರೆ ಅಷ್ಟು ನೀಡದಿರುವುದು ರಾಜ್ಯಗಳ ಸಮಸ್ಯೆಗೆ ಕಾರಣವಾಗಿದೆ. ರಾಜ್ಯದಲ್ಲಿ ಆದಾಯ ತೆರಿಗೆ, ಅಬ್ಕಾರಿ ಮತ್ತು ಕಸ್ಟಮ್್ಸ, ಜಿಎಸ್​ಟಿ, ವಿವಿಧ ಸೆಸ್​ಗಳ ಮೂಲಕ 3 ಲಕ್ಷ ಕೋಟಿ ರೂ. ಸಂಗ್ರಹಿಸುತ್ತದೆ. ಅದರ ಪ್ರಕಾರ 1.26 ಲಕ್ಷ ಕೋಟಿ ರೂ. ನೀಡಬೇಕು. ಆದರೆ ಕೇಂದ್ರದಿಂದ ಬರುತ್ತಿರುವುದು 43 ಸಾವಿರ ಕೋಟಿ ರೂ. ಮಾತ್ರ. ರಾಜ್ಯಗಳ ಸಮಸ್ಯೆಗೆ ಇದೇ ಮೂಲ ಕಾರಣವೂ ಹೌದು.

ಸ್ವಂತ ಸಂಪನ್ಮೂಲಕ್ಕೆ ಇಲ್ಲ ಬರ:

  •  ವಾಣಿಜ್ಯ ತೆರಿಗೆ 12 ಸಾವಿರ ಕೋಟಿ ರೂ. ಹೆಚ್ಚಳ ಸಾಧ್ಯತೆ
  •   ಅಬಕಾರಿ ತೆರಿಗೆ 3 ಸಾವಿರ ಕೋಟಿ ರೂ.ಹೆಚ್ಚಳ ಸಾಧ್ಯತೆ
  •  ಮೋಟಾರ್ ವಾಹನ ತೆರಿಗೆ 1 ಸಾವಿರ ಕೋಟಿ ರೂ. ಹೆಚ್ಚಳ ಸಾಧ್ಯತೆ
  •   ನೋಂದಣಿ 3 ಸಾವಿರ ಕೋಟಿ ರೂ. ಹೆಚ್ಚಳ ಸಾಧ್ಯತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net