

ನವದೆಹಲಿ: ‘ಬಿಟ್ ಕಾಯಿನ್ ವಿಚಾರವಾಗಿ ತಲೆಕೆಡಿಸಿಕೊಳ್ಳ ಬೇಡಿ. ಅಭಿವೃದ್ಧಿ ಕೆಲಸ ಮಾಡುತ್ತ, ಜನರ ವಿಶ್ವಾಸ ಗಳಿಸಲು ಮುಂದಾಗಿ’- ಗುರುವಾರ ದೆಹಲಿಯಲ್ಲಿ ನಡೆದ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಕ್ಕೆ ಇಂಥದ್ದೊಂದು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಪಿಎಂ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ ‘ನಾನೇ ಈ ವಿಚಾರದ ಬಗ್ಗೆ ಪ್ರಧಾನಿಗೆ ವಿವರಣೆ ನೀಡೋಣ ಎಂದುಕೊಂಡಿದ್ದೆ. ಆದರೆ ಹೆಚ್ಚು ರ್ಚಚಿಸಲು ಅವರು ಇಷ್ಟಪಡಲಿಲ್ಲ ಎಂದರು. ಈ ಬಗ್ಗೆ ನೀವು ಚಿಂತೆ ಮಾಡ ಬೇಡಿ. ನಿಷ್ಠೆ , ದಿಟ್ಟತನದಿಂದ ಕೆಲಸ ಮಾಡಿ. ಎಲ್ಲವೂ ಸರಿ ಹೋಗಲಿದೆ’ ಅಂತ ಮಾರ್ಗದರ್ಶನ ನೀಡಿರುವುದಾಗಿ ಹೇಳಿದರು.
ಸೋಲು ಗೆಲುವು ಸಹಜ: ಹಾನಗಲ್ ಉಪಚುನಾವಣೆ ಸೋಲಿನ ವಿವರಣೆ ನೀಡಿದಾಗ, ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರದ ಬಗ್ಗೆ ಜನರಲ್ಲಿ ನಂಬಿಕೆ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ಮೋದಿ ಸೂಚಿಸಿದ್ದಾಗಿ ಸಿಎಂ ವಿವರಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿ ಈಚೆಗೆ ಕೋರ್ ಕಮಿಟಿ ಸಭೆಯಲ್ಲಿ ನಡೆದ ವಿಷಯಗಳ ಬಗ್ಗೆ ವಿವರಣೆ ನೀಡಿದೆ. ಪರಿಷತ್ ಚುನಾವಣೆಗೆ 25 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಇದನ್ನು ತುರ್ತಾಗಿ ಮುಗಿಸಬೇಕೆಂದು ಮನವಿ ಮಾಡಿದ್ದೇನೆ. ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು. ಬಿಜೆಪಿ ನಾಯಕರ 4 ತಂಡಗಳ ರಾಜ್ಯ ಪ್ರವಾಸದ ಕುರಿತು ನಡ್ಡಾ ಮಾಹಿತಿ ಪಡೆದಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಕಾರ್ಯ ಗಳಲ್ಲಿ ತೊಡಗಿಕೊಂಡಿದ್ದಾರೆ. ಬಿಡುವಾದ ಕೂಡಲೇ ರಾಜ್ಯಕ್ಕೆ ಬಂದು ರಾಜ್ಯಾಧ್ಯಕ್ಷ, ಪದಾಧಿಕಾರಿಗಳ ಜತೆ ನಡ್ಡಾ ಸಭೆ ನಡೆಸಲಿದ್ದಾರೆ ಎಂದು ಸಿಎಂ ತಿಳಿಸಿದರು.
ಶತದಿನಕ್ಕೆ ಮೋದಿ ಮೆಚ್ಚುಗೆ: ರಾಜ್ಯ ಸರ್ಕಾರ 100 ದಿನಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಕೆಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ಸಲಹೆ ಮಾರ್ಗದರ್ಶನ ನೀಡಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಮತ್ತು ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ರಾಜ್ಯದ ಕಾರ್ಯಕ್ರಮಗಳನ್ನು ಪಿಎಂ ಶ್ಲಾಘಿಸಿದ್ದಾರೆ. ರೈತ ವಿದ್ಯಾನಿಧಿ ಯೋಜನೆಯಲ್ಲಿ ಸರ್ಕಾರ ಯಶಸ್ವಿಯಾಗಬೇಕು. ಡಿಜಿಟಲ್ ವೇದಿಕೆಯಲ್ಲಿ ರಾಜ್ಯದ ಎಲ್ಲ ರೈತರ ಮಾಹಿತಿ ಲಭ್ಯವಿರಲಿದೆ. ನಮ್ಮ ಯಶಸ್ಸನ್ನು ಇತರ ರಾಜ್ಯಗಳೂ ಗಮನಿಸುತ್ತವೆ. ಆ ಮೂಲಕ ಅಲ್ಲಿಯೂ ಯೋಜನೆ ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದು ಮೋದಿ ಅಭಿಪ್ರಾಯ ಹಂಚಿಕೊಂಡಿರುವುದಾಗಿ ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಪ್ರಗತಿ ಬಗ್ಗೆ ಮಾಹಿತಿ ಪಡೆದ ಪ್ರಧಾನಿ, ವಿಶ್ವವಿದ್ಯಾಲಯಗಳು, ಶಿಕ್ಷಕರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ನೀತಿಯನ್ನು ಅನುಷ್ಠಾನಗೊಳಿಸಬೇಕು ಎನ್ನುತ್ತಲೇ ಅಮೃತ ಯೋಜನೆಗಳ ಕುರಿತು ಹರ್ಷ ವ್ಯಕ್ತಪಡಿಸಿ, ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಂಯೋಜಿಸಬೇಕು. ಇದರ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನೇಮಕ ಮಾಡುವಂತೆ ಸಲಹೆ ನೀಡಿದ್ದಾರೆ. ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕ್ಗಳು ಸಾಲ ನೀಡಲು ಉತ್ಸುಕತೆ ತೋರದ ಬಗ್ಗೆ ಪಿಎಂ ಗಮನ ಸೆಳೆಯಲಾಗಿದ್ದು, ಹೆಚ್ಚಿನ ನೆರವು ನೀಡುವಂತೆ ಬ್ಯಾಂಕ್ಗಳಿಗೆ ಸಲಹೆ ನೀಡುತ್ತೇನೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಡಿಸೆಂಬರ್ನಲ್ಲಿ ರಾಜ್ಯಕ್ಕೆ ನಮೋ: ಡಿಸೆಂಬರ್ನಲ್ಲಿ ಬೆಂಗಳೂರಿಗೆ ಆಗಮಿಸುವಂತೆ ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರು ಉಪ ನಗರ ರೈಲು ಯೋಜನೆಗೆ ಅಡಿಗಲ್ಲು ಸಮಾರಂಭ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಉನ್ನತೀಕರಿಸಿದ ಐಟಿಐಗಳ ಉದ್ಘಾಟನೆ, ಬೆಂಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಹ್ವಾನಿಸಿದ್ದೇವೆ. ಡಿಸೆಂಬರ್ನಲ್ಲಿ 2 ಬಾರಿ ರಾಜ್ಯಕ್ಕೆ ಬರಲಿದ್ದಾರೆ. ಪ್ರಧಾನಿ ಕಾರ್ಯಾಲಯ ನಿಗದಿಪಡಿಸಿದ ದಿನಾಂಕಗಳಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.