ಕೋಟಿ ಉದ್ಯಮ ಸೃಷ್ಟಿ!; ಸ್ಥಳೀಯ ಉದ್ಯಮ-ಸ್ಥಳೀಯ ಉದ್ಯೋಗ ಪರಿಕಲ್ಪನೆಯ ನೀಲಿನಕ್ಷೆ ರೆಡಿ

Front Lead
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಉದ್ಯೋಗ ಅವಕಾಶಗಳನ್ನು ಹುಡುಕುವುದಕ್ಕಿಂತ ಆರ್ಥಿಕ ಅವಕಾಶಗಳನ್ನೇ ತೆರೆದಿಟ್ಟು ಯುವ ಸಮುದಾಯವನ್ನು ಉದ್ಯೋಗದಾತರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯದಲ್ಲಿ 2025ಕ್ಕೆ ಒಂದು ಕೋಟಿ ಆರ್ಥಿಕ ಅವಕಾಶ ತೆರೆದಿಡುವುದಕ್ಕೆ ಸಂಬಂಧಿಸಿದಂತೆ ನೀಲಿನಕ್ಷೆ ಸಿದ್ಧಪಡಿಸಲು ರಚನೆಯಾಗಿರುವ ತಜ್ಞರನ್ನೊಳಗೊಂಡ ಕರ್ನಾಟಕ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆ ಇದೇ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಉದ್ಯೋಗ ಸೃಷ್ಟಿ ವಿಚಾರದಲ್ಲಿ ಸರ್ಕಾರ ಹಾಗೂ ಖಾಸಗಿ ವಲಯದ ನಡುವೆ ಸಮನ್ವಯತೆ ಇಲ್ಲ. ಭವಿಷ್ಯದ ಅವಕಾಶಗಳ ಬಗ್ಗೆ ತಿಳಿವಳಿಕೆ ನೀಡುವ ಪ್ರಯತ್ನವೂ ನಡೆಯುತ್ತಿಲ್ಲ. ಹೀಗಾಗಿ ‘ಸ್ಥಳೀಯ ಉದ್ಯಮ-ಸ್ಥಳೀಯ ಉದ್ಯೋಗ’ ಎಂಬ ಪರಿಕಲ್ಪನೆಯಲ್ಲಿ ಆರ್ಥಿಕ ಅವಕಾಶಗಳನ್ನು ಯುವಕರ ಎದುರು ತೆರೆದಿಡುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 30 ಜನ 15 ರಿಂದ 29 ವರ್ಷದವರಿದ್ದಾರೆ. 30 ರಿಂದ 40 ಲಕ್ಷದಷ್ಟು ಯುವ ಸಮುದಾಯ ನಿರುದ್ಯೋಗ ಸಮಸ್ಯೆಗೆ ಸಿಲುಕಿದೆ. ಇದು ಆರ್ಥಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರಿದೆ. 21ನೇ ಶತಮಾನಕ್ಕೆ ತಕ್ಕಂತೆ ಡಿಜಿಟಲ್ ಕೌಶಲ್ಯ ನೀಡುವುದು ಒಟ್ಟಾರೆ ಯೋಜನೆ ಉದ್ದೇಶ. ಹತ್ತು ವಿದ್ಯಾರ್ಥಿಗಳಲ್ಲಿ ಒಂಬತ್ತು ಜನ ಸರ್ಕಾರಿ ಉದ್ಯೋಗವೇ ಬೇಕು ಎನ್ನುತ್ತಿದ್ದರು. ಆದರೆ ಈಗ ಉದ್ಯಮಿಯಾಗುವ ಅವಕಾಶವನ್ನು ಕೆಲವರು ಎದುರು ನೋಡುತ್ತಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚಿಸುವ ಸಲುವಾಗಿ ತರಬೇತಿ ನೀಡಲು ತೀರ್ವನಿಸಲಾಗಿದೆ.

ಕಾರ್ಯಪಡೆಯ ರಚನೆ: ಯುವ ಸಮುದಾಯದ ಎದುರು ಆರ್ಥಿಕ ಅವಕಾಶ ತೆರೆದಿಡಲು ಕ್ರಿಯಾ ಯೋಜನೆಯ ಅಗತ್ಯವಿದೆ. ಅದಕ್ಕಾಗಿಯೇ ಸ್ಟಾರ್ಟಪ್​ಗಳ ಮೂಲಕ ಯಶಸ್ವಿ ಉದ್ಯಮಿಯಾಗಿರುವವರನ್ನು ಒಳಗೊಂಡ ಕಾರ್ಯಪಡೆ ರಚನೆಯಾಗಿದೆ. ಆರು ಉಪ ಸಮಿತಿ ರಚಿಸಿಕೊಂಡು ವಲಯವಾರು ಅವಕಾಶ, ತರಬೇತಿ, ಯಾವ ಇಲಾಖೆ ಒಳಗೊಳ್ಳಬೇಕು ಎಂಬ ಬಗ್ಗೆ ರ್ಚಚಿಸಲಾಗಿದೆ. ಇದೀಗ ಉಪ ಸಮಿತಿಗಳ ವರದಿಯ ಆಧಾರದಲ್ಲಿ ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ. ಇದು ಕೇವಲ ವರದಿ ಆಗಿರದೆ ಅನುಷ್ಠಾನ ಹೇಗೆ ಮಾಡಬೇಕೆಂಬುದನ್ನೂ ವಿವರಿಸಲಿದೆ. ತಕ್ಷಣ ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಆರ್ಥಿಕ ಅವಕಾಶಗಳನ್ನು ಪ್ರಾಯೋಗಿಕವಾಗಿ ಸೃಷ್ಟಿಸುವುದು, ಅದಕ್ಕೆ ಅಗತ್ಯ ತರಬೇತಿ ನೀಡುವುದಕ್ಕೆ ವಿಶ್ವ ಉದ್ಯಮ ದಿನವಾದ ಆ.21ರಂದು ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ.

ಆರ್ಥಿಕ ನೆರವು: ಕೇವಲ ತರಬೇತಿಯಿಂದಷ್ಟೇ ಸಮಸ್ಯೆ ಬಗೆ ಹರಿಯುವುದಿಲ್ಲ. ಆರ್ಥಿಕ ನೆರವು ಕೊಡುವುದು ಹಾಗೂ ಮಾರುಕಟ್ಟೆ ಅವಕಾಶ ಕಲ್ಪಿಸುವುದಕ್ಕೂ ಯೋಜನೆ ಮಾಡಲಾಗಿದೆ. ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ಬ್ಯಾಂಕ್​ಗಳ ಸಾಲವಲ್ಲದೆ, ಅನೇಕ ಕಾಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅನೇಕ ಸಂಸ್ಥೆಗಳ ಜತೆ ಕಾರ್ಯಪಡೆ ಮಾತು ಕತೆ ನಡೆಸಿದೆ. ಅನೇಕ ಸಂಸ್ಥೆಗಳು ಉತ್ಸಾಹದಿಂದ ಮುಂದೆ ಬಂದಿವೆ. ಇದರ ಜತೆಗೆ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಯೋಜನೆಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಪ್ರಾಯೋಗಿಕ ಜಾರಿ: ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ, ಕೊಪ್ಪಳ, ರಾಯ ಚೂರು, ಧಾರವಾಡ, ಕೋಲಾರ ಮತ್ತು ಮೈಸೂರು.

ಉದ್ಯೋಗ ಎನ್ನುವುದಕ್ಕಿಂತ ಉದ್ಯೋಗದಾತರನ್ನಾಗಿಸುವುದು ಯೋಜನೆ ಉದ್ದೇಶ. ಯುವಜನರು ಹಾಗೂ ಇರುವ ಅವಕಾಶಗಳ ನಡುವಿನ ಅಂತರ ತುಂಬುವ ಕೆಲಸ ಮಾಡಲು ಮುಂದಾಗಿದ್ದೇವೆ. ಕಾರ್ಯಪಡೆಯ ಕ್ರಿಯಾ ಯೋಜನೆ ಬಂದ ಕೂಡಲೇ ಅನುಷ್ಠಾನ ಮಾಡುತ್ತೇವೆ.

| ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪ ಮುಖ್ಯಮಂತ್ರಿ

ಉದ್ದೇಶಗಳು

  • 21ನೇ ಶತಮಾನಕ್ಕೆ ಅಗತ್ಯವಾದ ಕೌಶಲ್ಯ ನೀಡುವುದು
  • ಶಾಲಾ, ಕಾಲೇಜುಗಳ ಹಂತದಲ್ಲಿಯೇ ಉದ್ಯೋಗ ದಾತರಾಗುವಂತೆ ಶಿಕ್ಷಣದ ಮೂಲಕ ಪ್ರೋತ್ಸಾಹ
  • ಭವಿಷ್ಯದಲ್ಲಿ ಇರುವ ಅವಕಾಶಗಳ ಮನವರಿಕೆ
  • ಬೆಂಗಳೂರಿನ ಜತೆಗೆ ಜಿಲ್ಲಾ ಮಟ್ಟದಲ್ಲಿರುವ ಅವಕಾಶಗಳ ಬಗ್ಗೆ ವಿವರಿಸುವುದು
  • ಡಿಜಿಟಲ್ ಸೇವೆ, ಮಾರುಕಟ್ಟೆ, ಕೃಷಿ ಹೀಗೆ ವಿವಿಧ ವಲಯದಲ್ಲಿ ಉದ್ಯಮಿಗಳಾಗುವ ಅವಕಾಶಗಳನ್ನು ಮನವರಿಕೆ ಮಾಡುವುದು
  • ಶಿಕ್ಷಣದ ಹಂತದಲ್ಲಿಯೇ ವ್ಯಾಪಾರ ಯೋಜನೆಗಳನ್ನು ಸಿದ್ಧಪಡಿಸಿಕೊಡುವುದು
  • ಜಿಲ್ಲಾ ಮಟ್ಟದಲ್ಲೂ ಉದ್ಯಮದ ಅವಕಾಶ ವಿವರಿಸುವುದು

ಉಪ ಸಮಿತಿಗಳ ಕಾರ್ಯ

  • ಶಾಲಾ-ಕಾಲೇಜು ಮಟ್ಟದಲ್ಲಿ ಡಿಜಿಟಲ್ ಸ್ಕಿಲ್ ಜಿಟಿಟಿಸಿ ಬಳಸಿಕೊಳ್ಳುವ ಬಗ್ಗೆ ವರದಿ
  • ಎಸ್​ಎಸ್​ಎಲ್​ಸಿ, ಪಿಯು ಮಂಡಳಿಗಳು, ಆರೋಗ್ಯ ಸಂಸ್ಥೆಗಳ ಮೂಲಕ ಮಾಹಿತಿ, ಮಾರ್ಗದರ್ಶನ
  • ಜಿಲ್ಲಾ ಮಟ್ಟದಲ್ಲಿ ಅವಕಾಶಗಳ ಬಗ್ಗೆ ಅಧ್ಯಯನ
  • ಯುವ ಉದ್ಯಮಿಗಳ ಸೃಷ್ಟಿಗೆ ಕಾಲೇಜು ಮಟ್ಟದಲ್ಲಿ ತರಬೇತಿ
  • ತಂತ್ರಜ್ಞಾನ ಬಳಕೆ ಮಾದರಿಗಳ ಸೃಷ್ಟಿ ಬಗ್ಗೆ ಅಧ್ಯಯನ
  • ಕೃಷಿ, ಕೃಷಿ ತಂತ್ರಜ್ಞಾನ ಬಗ್ಗೆ ಅಧ್ಯಯನ

ಯೋಜನೆ ಸಿದ್ಧವಾದ ಕೂಡಲೇ ಕಾಪೋರೇಟ್ ಸಂಸ್ಥೆಗಳ ಜತೆ ಇನ್ನೊಂದು ಸುತ್ತಿನ ಸಭೆ ನಡೆಸಲಾಗುತ್ತದೆ. ಕಾರ್ಯಪಡೆ ಸೇತುವೆ ರೀತಿ ಕೆಲಸ ಮಾಡಲಿದೆ. ಏನು ಆಗುತ್ತಿದೆ, ಏನು ಆಗಬೇಕು, ಯಾರು ಮಾಡಬೇಕೆಂಬುದನ್ನು ಅಧ್ಯಯನ ಮಾಡಲಾಗುತ್ತಿದೆ. ಬೇಡಿಕೆ ಜತೆಗೆ ಪೂರೈಕೆ ಕಡೆಯೂ ನೋಡುತ್ತಿದ್ದೇವೆ.

| ಮದನ್ ಪಡಕೆ ಸಹ ಸಂಚಾಲಕ, ಕರ್ನಾಟಕ ಕೌಶಲ್ಯ ಉದ್ಯಮಶೀಲತಾ ಕಾರ್ಯಪಡೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net