

ಕಡಬ: ಡಿಸೆಂಬರ್ನಲ್ಲಿ ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಕುರಿತು ಇತ್ತೀಚೆಗೆ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಜನಪದ ಕುಣಿತ ಮತ್ತು ಕುಣಿತ ಭಜನಾ ಸ್ಪರ್ಧೆ, ಬೊಳ್ಳಿ ಬೊಲ್ಪು ತುಳುಕೂಟ ಸವಣೂರಿನಲ್ಲಿ ಜನಪದ ಆಟಗಳ ಸ್ಪರ್ಧೆ ನಡೆಸುವುದು. ತುಳು ಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಸ್ಪರ್ಧೆಗಳನ್ನು ತೆಗ್ರ್ ತುಳುಕೂಟ ನೂಜಿಬಾಳ್ತಿಲ ವಹಿಸಿಕೊಳ್ಳುವುದಾಗಿ ನಿರ್ಣಯ ಕೈಗೊಳ್ಳಲಾಯಿತು.
ಸ್ಪರ್ಧೆಗಳನ್ನು ಪ್ರಾಥಮಿಕ, ಪ್ರೌಢಶಾಲಾ, ಪ.ಪೂ., ಪದವಿ ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗದಲ್ಲಿ ನಡೆಸುವುದು. ಅ.30ರ ಒಳಗಾಗಿ ಎಂಟ್ರಿಶೀಟ್ ಪಡೆದು ನ.10ರ ಒಳಗಾಗಿ ಫಲಿತಾಂಶ ಪಡೆಯಬೇಕು ಹಾಗೂ ಇದರ ಜವಾಬ್ದಾರಿಯನ್ನು ಆಯಾ ಸಂಘಟಕರೇ ವಹಿಸುವಂತೆ ಸೂಚಿಸಲಾಯಿತು. ಸ್ಪರ್ಧಾಳುಗಳು ಸಂಘಟಕರಾದ ಕಾಣಿಯೂರು ಪ್ರಗತಿ ವಿದ್ಯಾಲಯದ ಜಯಸೂರ್ಯ ರೈ ಮಾದೋಡಿ, ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಗಿರೀಶಂಕರ್ ಸುಲಾಯ ಹಾಗೂ ನೂಜಿಬಾಳ್ತಿಲ ತೆಗ್ರ್ ತುಳುಕೂಟದ ಉಮೇಶ್ ಶೆಟ್ಟಿ ಸಾಯಿರಾಮ್ ಅವರನ್ನು ಸಂಪರ್ಕಿಸುವಂತೆ ನಿರ್ಣಯಿಸಲಾಯಿತು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಮಹಾದಾನಿಗಳು, ಗೌರವ ಪೋಷಕರು ಮತ್ತು ಪೋಷಕರನ್ನು ಸನ್ಮಾನಿಸುವುದು, ಜನಪದ ವಸ್ತುಗಳ ಪ್ರದರ್ಶನ, ಮಾರಾಟ, ಕಡಬ ಪೇಟೆಯಿಂದ ವಾಹನಗಳ ಮೆರವಣಿಗೆ ಮೂಲಕ ವೇದಿಕೆಗೆ ಆಗಮನ, ಸಮ್ಮೇಳನದ ವಿರಾಮದ ನಡುವೆ ತುಳು ಮೂಲ ನೃತ್ಯಗಳ ಪ್ರದರ್ಶನ ಮಾಡುವುದಾಗಿ ಚರ್ಚಿಸಲಾಯಿತು. ಅ.26ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಂದಿನ ಸಮಾಲೋಚನಾ ಸಭೆ ನಡೆಸಲು ತೀರ್ಮಾನಿಸಲಾಯಿತು.
ನೇತ್ರಾವತಿ ತುಳುಕೂಟ ಅಧ್ಯಕ್ಷ ಕೆ.ಸೇಸಪ್ಪ ರೈ, ಕುಟ್ರುಪ್ಪಾಡಿ ಕೇಪು ಶ್ರೀ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಪ್ರಗತಿ ವಿದ್ಯಾಸಂಸ್ಥೆ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಜನಾರ್ದನ ಗೌಡ ಪಣೆಮಜಲು, ಪುಲಸ್ತ್ಯಾ ರೈ ಉಪಸ್ಥಿತರಿದ್ದರು. ಸರಿತಾ ಜನಾರ್ದನ ಸ್ವಾಗತಿಸಿದರು. ಕಿಶೋರ್ ಕಾರ್ಯಕ್ರಮದ ನಿರ್ಣಯ ಮಂಡಿಸಿದರು. ಪ್ರೇಮಾ ಸಹಕರಿಸಿದರು. ಉಮೇಶ್ ಶೆಟ್ಟಿ ಸಾಯಿ ರಾಮ್ ವಂದಿಸಿದರು.