ಕೆಂಪು ಕಲ್ಲು ದರ ಹೆಚ್ಚಳ ನಿಯಂತ್ರಣಕ್ಕೆ ಸಿವಿಲ್ ಗುತ್ತಿಗೆದಾರ ಸಂಘದ ಆಗ್ರಹ

Civil
Published on

ಮಂಗಳೂರು: ಕೆಂಪು ಕಲ್ಲಿನ ಗಣಿಗಾರಿಕೆಯ ಪರವಾನಗಿಯನ್ನು ಸರಳೀಕರಣಗೊಳಿಸಿ ಗುತ್ತಿಗೆದಾರರ ರಾಜಧನವನ್ನೂ ಸರ್ಕಾರ ಕಡಿಮೆಗೊಳಿಸಿದೆ. ಆದರೆ ಕೆಂಪುಕಲ್ಲಿನ ಪೂರೈಕೆದಾರರು ದುಪ್ಪಟ್ಟು ದರ ಪಡೆಯುತ್ತಿರುವುದರಿಂದ ಕಟ್ಟಡ ಕಾಮಗಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ದ.ಕ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಒತ್ತಾಯಿಸಿದೆ.

ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಸೋಸಿಯೇಶನ್‌ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಡಳಿತ ಕ್ರಮ ವಹಿಸಬೇಕು ಇಲ್ಲವಾದಲ್ಲಿ, ಪ್ರತಿಭಟನೆ ಅನಿವಾರ್ಯ ಎಂದರು.

ಅಕ್ರಮವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಲವೊಂದು ಕಟ್ಟು ನಿಟ್ಟಿನ ಕ್ರಮ ವಹಿಸಿದ್ದರು. ಆ ಸಂದರ್ಭ ರಾಜಧನವೂ 265 ರೂ.ಗಳಿಂದ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು ಸಂಕಷ್ಟಕ್ಕೆ ಸಿಲುಕಿದ್ದರು. ಕೆಂಪು ಕಲ್ಲು ಸಿಗದೆ ಸುಮಾರು ಮೂರ್ನಾಲ್ಕು ತಿಂಗಳು ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗಿತ್ತು. ಬಳಿಕ ಈ ಬಗ್ಗೆ ಕೆಂಪು ಕಲ್ಲು ಗಣಿಗಾರಿಕೆ ಮಾಡುವವರು ಸೇರಿದಂತೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರರು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಜತೆ ಸೇರಿ ಚರ್ಚಿಸಿ ಕ್ರಮ ವಹಿಸಲಾಗಿತು. ರಾಜಧನವನ್ನು ಇಳಿಕೆ ಮಾಡಲಾಗಿದೆ. 3 ಅಡಿ ಗಣಿಗಾರಿಕೆಗೆ ಇದ್ದ ನಿಯಮವನ್ನು ಆರು ಅಡಿಗಳಿಗೆ ಹೆಚ್ಚಿಸಿ ಕೆಂಪು ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲಾಗುತ್ತಿದೆ. ಹಿಂದೆ 30 ರೂ.ಗಳಿಗೆ ದೊರೆಯುತ್ತಿದ್ದ ಕಲ್ಲಿನ ದರ ಈಗ 55 ರೂ.ಗೆ ಏರಿಕೆಯಾಗಿದೆ. ರಾಜಧನ ಇಳಿಕೆಯಾದರೂ ಕೆಂಪು ಕಲ್ಲಿನ ದರ ಇಳಿಕೆ ಮಾಡಿಲ್ಲ. ಈ ದರದಲ್ಲಿ 1200 ಚದರ ಅಡಿ ವಿಸ್ತೀರ್ಣದ ಮನೆಗೆ ಅಂದಾಜು ಸುಮಾರು 3 ಲಕ್ಷದವರೆಗೆ ವೆಚ್ಚ ಹೆಚ್ಚಳವಾಗುತ್ತದೆ. ಈ ದರದಲ್ಲಿ ನಮಗೂ ಮನೆ ನಿರ್ಮಾಣ ಕಾಮಗಾರಿ ಸಾಧ್ಯವಾಗುತ್ತಿಲ್ಲ. ನಿರ್ದಿಷ್ಟ ಮೊತ್ತಕ್ಕೆ ಮನೆ ನಿರ್ಮಾಣಕ್ಕೆ ಒಪ್ಪಿಕೊಂಡ ಗುತ್ತಿಗೆದಾರರು ಈ ದರ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಾವು ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಮನೆ ಕಟ್ಟಲು ಸಮಸ್ಯೆಯಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ನ್ಯಾಯಯುತ ದರ ನಿಗದಿಪಡಿಸಬೇಕು. ಅದಲ್ಲದೆ ಸಿಆರ್‌ಝೆಡ್ ವ್ಯಾಪ್ತಿಯ ಮರಳಿನ ಸಮಸ್ಯೆ ಬಗೆಹರಿಸಬೇಕು. ಮೂರು ಯುನಿಟ್ ಮರಳಿನ ದರ 6500 ರೂ.ನಿಂದ ಇದೀಗ 23,000ಕ್ಕೆ ಏರಿಕೆಯಾಗಿದೆ. ನಾನ್ ಸಿಆರ್‌ಝೆಡ್ ಮರಳಿನಲ್ಲಿ ಅರ್ಧಕರ್ಧ ಕಲ್ಲು ಮಣ್ಣು ಸೇರಿರುತ್ತದೆ. ಇದರಿಂದಾಗಿ ನಷ್ಟವೇ ಅಧಿಕ ಎಂದು ಅವರು ಹೇಳಿದರು.

ಅಸೋಸಿಯೇಶನ್‌ನ ಉಪಾಧ್ಯಕ್ಷ ದಿನಕರ ಸುವರ್ಣ, ಸತೀಶ್ ಕುಮಾರ್, ಕಾರ್ಯದರ್ಶಿ ಅಶೋಕ್ ಕುಲಾಲ್, ಕೋಶಾಧಿಕಾರಿ ಸುರೇಶ್ ಜೆ., ಸದಸ್ಯರಾದ ವೆಂಕಟೇಶ್, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net