ಕಟ್ಟೆಯಲ್ಲಿ ಊರಿನ ರಸಿಕರು; ವೆಬ್​ಸಿರೀಸ್ ಆಯಿತು ಗೊರೂರರ ಕಥಾಸಂಕಲನ

Rasikaru
Published on

ಬೆಂಗಳೂರು: ಗೊರೂರು ರಾಮಸ್ವಾಮಿ ಅಯ್ಯಂಗಾರರ ಜನಪ್ರಿಯ ಕೃತಿಗಳ ಪೈಕಿ ‘ನಮ್ಮ ಊರಿನ ರಸಿಕರು’ ಸಹ ಒಂದು. ಸ್ವಾತಂತ್ರ್ಯಪೂರ್ವದಲ್ಲಿ ಗೊರೂರು ಎನ್ನುವ ಸುಂದರ ಊರಿನ ಹಲವು ಕಥೆಗಳನ್ನು ಮತ್ತು ಅಲ್ಲಿನ ವೈವಿಧ್ಯಮಯ ಜನರನ್ನು, ಅವರು ಈ ಕಥಾಸಂಕಲನದಲ್ಲಿ ಅದ್ಭುತವಾಗಿ ಹಿಡಿದಿಟ್ಟಿದ್ದರು. ಈಗ ಅದೇ ‘ನಮ್ಮ ಊರಿನ ರಸಿಕರು’ ವೆಬ್​ಸಿರೀಸ್ ಆಗಿ ಮೂಡಿಬರುತ್ತಿದ್ದು, ಖ್ಯಾತ ನಗೆನಟ ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಮತ್ತು ಅವಿನಾಶ್ ಹೊಸದಾಗಿ ಹುಟ್ಟುಹಾಕಿರುವ ‘ಕಟ್ಟೆ’ ಎಂಬ ಓಟಿಟಿಯಲ್ಲಿ ಸದ್ಯದಲ್ಲೇ ಸ್ಟ್ರೀಮ್ ಆಗಲಿದೆ. ‘ನಮ್ಮ ಊರಿನ ರಸಿಕರು’ ಕಥಾಸಂಕಲನಕ್ಕೆ ದೃಶ್ಯರೂಪ ಕೊಟ್ಟಿರುವುದು ನಂದಿನಿ ಯಾದವ್. ನಟಿಯಾಗಿ ಗುರುತಿಸಿಕೊಂಡಿರುವ ನಂದಿನಿ, ಮಾನ್ವಿತಾ ಹರೀಶ್ ಅಭಿನಯದ ‘ರಾಜಸ್ಥಾನ್ ಡೈರೀಸ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ಚಿತ್ರ ಇನ್ನಷ್ಟೇ ಬಿಡುಗಡೆ ಯಾಗಬೇಕಿದ್ದು, ಅದಕ್ಕೂ ಮುನ್ನವೇ ಅವರು ‘ನಮ್ಮ ಊರಿನ ರಸಿಕರು’ ಕಥೆಗಳನ್ನು ಶಿವಮೊಗ್ಗದ ಜಿಲ್ಲೆಯ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಈ ಕಥೆಗಳನ್ನು ಅವರು ಎರಡು ಸೀಸನ್​ಗಳ ಮೂಲಕ ಹೇಳಹೊರಟಿದ್ದು, ಪ್ರತಿಯೊಂದು ಸೀಸನ್​ನಲ್ಲಿ ಎಂಟು ಕಂತುಗಳಿರುತ್ತವೆ. ಈ ವೆಬ್​ಸರಣಿಯಲ್ಲಿ ರಾಜೇಶ್ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಮಂಡ್ಯ ರಮೇಶ್, ಬಿ. ಸುರೇಶ್, ರಮೇಶ್ ಪಂಡಿತ್, ಸುನೇತ್ರಾ ಪಂಡಿತ್, ವೀಣಾ ಸುಂದರ್, ಸುಜಯ್ ಶಾಸ್ತ್ರಿ. ಶೃಂಗ, ಪಿ. ಶೇಷಾದ್ರಿ ಮುಂತಾದ ಪ್ರತಿಭಾವಂತ ಕಲಾವಿದರು ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಇನ್ನು, ಅಶೋಕ್ ಕಶ್ಯಪ್ ಛಾಯಾಗ್ರಹಣ ಮಾಡಿದರೆ, ಪ್ರಕಾಶ್ ಸೊಂಟಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಅರಸ್ ಅವರ ಸಂಕಲನ ಈ ವೆಬ್​ಸರಣಿಗಿದೆ. ‘ನಮ್ಮ ಊರಿನ ರಸಿಕರು’ ವೆಬ್​ಸರಣಿಯು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಜೂನ್ ತಿಂಗಳಿನಿಂದ ‘ಕಟ್ಟೆ’ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net