ಬೆಳೆ ಪರಿಹಾರವನ್ನು ಸಾಲಕ್ಕೆ ವಜಾ ಮಾಡದಂತೆ ಸೂಚನೆ

Bankers-Meeting
Published on

ಕಾರವಾರ: ರೈತರ ಖಾತೆಗಳಿಗೆ ಜಮಾ ಆಗಿರುವ ಬೆಳೆ ಪರಿಹಾರದ ಮೊತ್ತವನ್ನು ಬೇರೆ ಸಾಲದ ಬಾಕಿಗೆ ವರ್ಗಾಯಿಸಿಕೊಳ್ಳದಂತೆ ಜಿಪಂ ಸಿಇಒ ಈಶ್ವರ ಕಾಂದೂ ಅವರು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಬರ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ನಿರ್ದೇಶನ ನೀಡಿದ್ದು, ಅದನ್ನು ಎಲ್ಲ ಬ್ಯಾಂಕ್ ಅಧಿಕಾರಿಗಳು ಪಾಲಿಸಬೇಕು ಎಂದು ಕರೆ ನೀಡಿದರು. ಸಣ್ಣಪುಟ್ಟ ಕಾರಣಗಳಿಗೆ ಸಾಲವನ್ನು ತಿರಸ್ಕರಿಸಬೇಡಿ. ದಾಖಲೆಗಳ ಕೊರತೆ ಇದ್ದರೆ ಅರ್ಜಿದಾರರಿಂದ ಅದನ್ನು ಪಡೆದು ಸಾಲ ಮಂಜೂರು ಮಾಡಿ ಎಂದು ಸೂಚಿಸಿದರು.
ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತವು ನಿಗದಿತ ಗುರಿಗಿಂತ ಕಡಿಮೆಯಿದೆ. ಪಶುಪಾಲನೆ ಮತ್ತು ಮೀನುಗಾರಿಕೆ ಇಲಾಖೆವತಿಯಿಂದ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ, ಮುದ್ರಾ, ಸ್ಟಾರ್ಟ್ ಅಪ್, ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಪ್ರವಾಸೋದ್ಯಮ ಚಟುವಟಿಕೆಗೆ, ಪಿಎಂ ಸ್ವ ನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಅರ್ಹರಿಗೆ ಸಾಲ ನೀಡಿ ಎಂದರು. ಅಲ್ಲದೆ, ಸಾಲ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಎಂದರು. ಲೀಡ್ ಬ್ಯಾಂಕ್ ಮ್ಯಾನೇಜರ್ ರೇವತಿ ಸುಧಾಕರ್, ನಬಾರ್ಡ್ ಡಿಡಿಎಂ ಸುಶೀಲ್ ನಾಯ್ಕ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಕಾರಿ ವಿನೋದ ಅಣ್ವೇಕರ್ ವೇದಿಕೆಯಲ್ಲಿದ್ದರು.

7748 ಕೋಟಿ ಸಾಲ ವಿತರಣೆ

ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಬಿ.ಎಸ್. ಶುಭಾ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ತ್ರೆಮಾಸಿಕ ಅವಧಿಯಲ್ಲಿ 7,824 ಕೋಟಿ ಸಾಲ ವಿತರಣೆ ಗುರಿಗೆ 7,748 ಕೋಟಿ ರೂ. ಸಾಲ ವಿತರಿಸಿ, ಶೇ. 99.02 ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 2,824 ಕೋಟಿ, ಮಧ್ಯಮ ಮತ್ತು ಸಣ್ಣ ವಲಯಕ್ಕೆ 2,616 ಕೋಟಿ ಸಾಲ ವಿತರಿಸಲಾಗಿದೆ. ಗೃಹ ನಿರ್ಮಾಣ ಮತ್ತು ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್ ಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಕಳೆದ ಸಾಲಿಗೆ ಹೋಲಿಸಿದಲ್ಲಿ ಪ್ರಗತಿಯಾಗಿದ್ದು, ಸಾಲ ನೀಡಿಕೆ ಪ್ರಮಾಣ ಇನ್ನೂ ಹೆಚ್ಚಳವಾಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net