ಚಿಕ್ಕಬಳ್ಳಾಪುರದಲ್ಲಿ ಜಿಕಾ ವೈರಸ್ ಪತ್ತೆ ಪ್ರಕರಣ: ಹೆಚ್ಚಿದ ಆತಂಕ, 31 ಗರ್ಭಿಣಿಯರಿಗೆ ರಕ್ತ ಪರೀಕ್ಷೆ

Zika Virus 1
Published on

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿನ ಸೊಳ್ಳೆಗಳ ರಕ್ತ ಪರೀಕ್ಷೆಯ ವೇಳೆ ಸೊಳ್ಳೆಗಳಲ್ಲಿ ಮಾರಕ ಜಿಕಾ ವೈರಸ್ ಇರುವುದು ಧೃಡವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಚಿಕ್ಕಬಳ್ಳಾಪುರದಲ್ಲಿ ಮನುಷ್ಯರಲ್ಲಿ ಇದುವರೆಗೂ ಜಿಕಾ ವೈರಸ್ ಧೃಡವಾಗದಿರುವುದು ಸಂತಸದ ಸಂಗತಿಯಾದರೂ ಇದು ಆಘಾತಕಾರಿ ಎಂಬುದನ್ನು ಮರೆಯುವಂತಿಲ್ಲ. ಸದ್ಯಕ್ಕೆ ಮುಂಜಾಗ್ರತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ಈಗಾಗಲೇ ತಲಕಾಯಲಬೆಟ್ಟ ಗ್ರಾಮದ 5 ಕಿ.ಮೀ ಸುತ್ತಲಿನ ಐದು ಗ್ರಾಮಗಳಲ್ಲಿ 31 ಗರ್ಭಿಣಿಯರ ರಕ್ತ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು 4 ಮಂದಿ ಜ್ವರಪೀಡಿತರ ರಕ್ತದ ಮಾದರಿಯನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಪರೀಕ್ಷೆಗೆ ಕಳುಹಿಸಿರುವ ರಕ್ತದ ಮಾದರಿ ವರದಿ ಬರಲು 15 ದಿನಗಳಾಗಲಿದ್ದು, ವರದಿ ಬಂದ ನಂತರ ಜಿಕಾ ವೈರಸ್ ಹರಡಿದೆಯಾ? ಇಲ್ಲವಾ? ಎಂಬುದು ನಿಖರವಾಗಿ ತಿಳಿಯಲಿದೆ. ಅಲ್ಲಿಯವರೆಗೂ ಮುಂಜಾಗ್ರತಾ ಕ್ರಮವಾಗಿ ಗರ್ಭಿಣಿಯರ ಆರೋಗ್ಯದ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಗೆ ಸೂಚನೆ ನೀಡಲಾಗಿದೆ. ಸೊಳ್ಳೆ ಪರದೆ ಬಳಸಿಕೊಂಡು ಮಲಗಲು ಸೂಚಿಸಿಲಾಗಿದೆ.

ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಂಡು ಜಿಕಾ ವೈರಸ್ ಆತಂಕದಿಂದ ದೂರ ಇರಲು ಸಲಹೆಗಳನ್ನು ನೀಡಲಾಗುತ್ತಿದೆ. ಗರ್ಭಿಣಿಯರಿಗೆ ಈ ಸೊಳ್ಳೆ ಕಚ್ಚಿದರೆ ತುಂಬಾ ಪ್ರಭಾವ ಬೀರುತ್ತದೆ. ಏನಾದರೂ ವೈರೆಸ್ ಕಂಡುಬಂದರೆ ಮಾರಕವಾಗಬಹುದು. ಗರ್ಭಾವಸ್ಥೆಯಲ್ಲಿರುವ ಮಗುವಿಗೆ ನರ ದೌರ್ಭಲ್ಯ ಉಂಟಾಗಿ ಹುಟ್ಟುವ ಮಗು ಅಂಗವಿಕಲರಾಗಿ ಹುಟ್ಟುವ ಸಂಭವ ಹೆಚ್ಚಾಗಿದೆ ಹಾಗಾಗಿ ಆ ಗ್ರಾಮದಲ್ಲಿ ಎಲ್ಲಾ ಗರ್ಭಿಣಿಯರನ್ನು ತಪಾಸಣೆ ನಾಡಲಾಗಿದೆ.

ಏನಿದು ಜಿಕಾ ವೈರಸ್​?

ಈ ಜಿಕಾ ವೈರಸ್ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಈಡಿಸ್ ಈಜಿಪ್ಟಿ ಎಂಬ ಹೆಸರಿನ ಸೊಳ್ಳೆಯಿಂದ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ಕಚ್ಚುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದದ್ದು, ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು 2-7 ದಿನಗಳವರೆಗಿನ ತಲೆನೋವು ಜಿಕಾ ಲಕ್ಷಣಗಳು.

Zika Virus
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net