

ವಿಜಯವಾಣಿ ಸುದ್ದಿಜಾಲ ಕೋಟ
ಐರೋಡಿ ಗ್ರಾಮ ಪಂಚಾಯಿತಿಯ ಪ್ರತೀ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾಪಿಸುವ ಸಮಸ್ಯೆಗಳ ಕುರಿತು ನಿರ್ಣಯಿಸಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿದರೂ ಸ್ಪಂದನೆ ಮಾತ್ರ ಶೂನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಉಪಸ್ಥಿತಿ ಕಡಿಮೆ ಕಂಡುಬಂದಿದ್ದು, ಗ್ರಾಮಸಭೆ ಮಹತ್ವ ಕಳೆದುಕೊಳ್ಳುತ್ತಿದೆ ಎಂದು ಗ್ರಾಮಸ್ಥ ಐರೋಡಿ ಸುರೇಶ್ ಕುಂದರ್ ಅಸಮಾಧಾನ ವ್ಯಕ್ತಪಡಿಸಿದರು.
ಐರೋಡಿ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯಾದ ಜಲಜೀವನ್ ಯೋಜನೆಯನ್ನು ಗ್ರಾ.ಪಂ. ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಜತೆಗೆ ಜಲಜೀವನ್ ಯೋಜನೆಗಾಗಿ ವಿವಿಧೆಡೆ ರಸ್ತೆ ಅಗೆದು ಹಾನಿಗೊಳಿಸಲಾಗಿದೆ. ಕಾಮಗಾರಿ ಲೋಪವಾಗಿದ್ದು, ಪಿಡಿಒ ಕೂಡ ಗುತ್ತಿಗೆದಾರನ ಪರ ಕಾರ್ಯನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು.
ಐರೋಡಿ ತಡೆಗೋಡೆ ಪ್ರಸ್ತಾಪ: ಬೆಣ್ಣೆಕುದ್ರು ನದಿಗೆ ನಿರ್ಮಿಸಿರುವ ಡ್ಯಾಂನಿಂದ ಐರೋಡಿ ಬಾಳ್ಕುದ್ರುವಿನಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಿಸುವ ಕುರಿತು ಹಿಂದಿನ ಸಭೆಯಲ್ಲಿ ನಿರ್ಧಾರವಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗ್ರಾಮಸ್ಥ ಡೆನಿಸ್ ನಾಯ್ಕ ಸಭೆಯ ಗಮನಕ್ಕೆ ತಂದರು. ನೋಡಲ್ ಅಧಿಕಾರಿ ಸಂದೇಶ್ ಶೆಟ್ಟಿ ಉತ್ತರಿಸಿ, ಈ ಕುರಿತು ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ವಿದ್ಯುತ್‌ಲೈನ್ ಕೆಳಗೆ ಗಿಡ ನಾಟಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಸ್ಕಾಂ ಲೈನ್ ಕೆಳಗಡೆ ಗಿಡ ನೆಡಲಾಗುತ್ತಿದ್ದು, ಇನ್ನೊಂದೆಡೆ ಮೆಸ್ಕಾಂನವರು ಕಡಿಯುತ್ತಿದ್ದಾರೆ. ಲೈನ್ ಅಡಿಯಲ್ಲಿ ಗಿಡಗಳನ್ನು ನೆಡುವುದೇಕೆ ಎಂದು ವಿಠಲ್ ಐರೋಡಿ ಪ್ರಶ್ನಿಸಿದರು. ದೂಳಂಗಡಿ ಶಾಲಾ ಎಸ್‌ಡಿಎಂಸಿ ಸದಸ್ಯ ರಾಮ ಇದಕ್ಕೆ ದನಿಗೂಡಿಸಿದರು. ಅರಣ್ಯ ಇಲಾಖೆಯ ಮಾಲತೇಶ್ ಪ್ರತಿಕ್ರಿಯಿಸಿ, ಇಲಾಖೆ ವತಿಯಿಂದ ಗಿಡ ನೆಟ್ಟಿಲ್ಲ. ಇದು ಹೆದ್ದಾರಿ ಇಲಾಖೆ ಕಾರ್ಯವಾಗಿದ್ದು, ಈ ಕುರಿತು ಮಾಹಿತಿ ಪಡೆಯುತ್ತೇವೆ ಎಂದರು.
ಪಂಚಾಯಿತಿ ಅಧ್ಯಕ್ಷೆ ಸಕು, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಇಂಜಿನಿಯರ್ ಆಕಾಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್, ಬಾಳ್ಕುದ್ರು ಮಂಜುನಾಥ್, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ವಿಜಯ ಭಂಡಾರಿ ನಿರೂಪಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. 300ಕ್ಕೂ ಅಧಿಕ ಬೀದಿ ನಾಯಿಗಳು ಸುತ್ತಮುತ್ತಲು ಓಡಾಡುತ್ತಿದ್ದು, ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಈ ಕುರಿತು ಕ್ರಮಕೈಗೊಳ್ಳಲೇಬೇಕು ಎಂದು ಸುರೇಶ್ ಕುಂದರ್ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಡೆನಿಸ್ ನಾಯ್ಕ ಅವರು ಶ್ವಾನ ಶಾಲೆ ಸ್ಥಾಪಿಸುವಂತೆ ಸಲಹೆ ನೀಡಿದರು. ಪಂಚಾಯಿತಿ ಸದಸ್ಯ ಶಿವರಾಮ್ ಶ್ರೀಯಾನ್ ಉತ್ತರಿಸಿ, ಶ್ವಾನಗಳ ಸಂತಾನ ಶಕ್ತಿ ಹರಣ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ನಾಯಿಗಳಿಗೆ ರೇಬಿಸ್ ಲಸಿಕೆ ನೀಡಬೇಕಿರುವ ಸಾಸ್ತಾನದ ಪಶು ಆಸ್ಪತ್ರೆಯವರು ಖಾಸಗಿ ಮೆಡಿಕಲ್‌ಗೆ ಶಿಫಾರಸು ಮಾಡುತ್ತಿದ್ದಾರೆ. ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿಲ್ಲದಿರುವುದು ಶೋಚನೀಯ ಸ್ಥಿತಿ ಎಂದು ಐರೋಡಿ ಮಂಜುನಾಥ್ ಶಂಕರ್ ಕುಲಾಲ್ ಹೇಳಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿತಗೊಳಿಸಲಾಗುತ್ತಿದೆ. ವರ್ಗಾವಣೆ ನೆಪದಲ್ಲಿ ಶಿಕ್ಷಕರನ್ನು ಬೇರೆಡೆಗೆ ನೇಮಿಸುವುದರಿಂದ ಕನ್ನಡ ಮಾಧ್ಯಮ ಶಾಲೆಗಳು ಸೊರಗಿವೆ ಎಂದು ಐರೋಡಿ ವಿಠಲ್ ಪೂಜಾರಿ ವಿಚಾರ ಪ್ರಸ್ತಾಪಿಸಿದರು. ಶಿಕ್ಷಣ ಇಲಾಖೆಯ ಸಂಯೋಜಕ ಪ್ರಕಾಶ್ ಬಿ.ಬಿ. ಈ ಬಗ್ಗೆ ಶಿಕ್ಷಣ ಇಲಾಖೆ ಗಮನಕ್ಕೆ ತರಲಾಗಿದೆ ಎಂದರು.