

ಬೆಂಗಳೂರು: ರಾಷ್ಟ್ರೀಯ ತಂಡದಲ್ಲಿ ಸ್ಪಿನ್ ಬೌಲಿಂಗ್ ಮೂಲಕ ತಮ್ಮದೇ ಚಾಪು ಮೂಡಿಸಿದ್ದ ಹರ್ಭಜನ್ ಸಿಂಗ್ ಶುಕ್ರವಾರ 40ನೇ ವರ್ಷಕ್ಕೆ ಕಾಲಿಟ್ಟರು. ಕೇವಲ ಕ್ರಿಕೆಟ್ ವಲಯ ಅಲ್ಲದೆ, ವಿವಿಧ ಕ್ಷೇತ್ರ ಗಣ್ಯರು, ಸೆಲೆಬ್ರಿಟಿಗಳು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ಹರ್ಭಜನ್ ಸಿಂಗ್ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಬಜ್ಜಿ ಆತ್ಮೀಯ ಗೆಳೆಯ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮಾತ್ರ ಇದಕ್ಕೆ ವಿಭಿನ್ನ. ನಿಮ್ಮ 40 ಅಥವಾ 47ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳು ಪಾಜಿ ಎಂದು ವಿಶ್ ಮಾಡುವ ಮೂಲಕ ಕಾಲೆಳೆದಿದ್ದಾರೆ.
2000 ಇಸವಿಯಿಂದಲೂ ಯುವರಾಜ್ ಸಿಂಗ್ - ಹರ್ಭಜನ್ ಸಿಂಗ್ ಆತ್ಮೀಯ ಸ್ನೇಹಿತರು ಎಂಬುದರಲ್ಲಿ ಎರಡು ಮಾತಿಲ್ಲ. ಒಬ್ಬರಿಗೊಬ್ಬರು ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ಹರಟುತ್ತಾರೆ. ಪಂಜಾಬ್, ಟೀಮ್ ಇಂಡಿಯಾ ಪರ ಒಟ್ಟಿಗೆ ಆಡಿರುವ ಈ ಜೋಡಿ ದೇಶೀಯ ಕ್ರಿಕೆಟ್ ವಲಯದಲ್ಲಿ ಆತ್ಮೀಯ ಸ್ನೇಹಿತರು ಎಂದೇ ಗುರಿತಿಸಿಕೊಂಡಿದೆ. 40ನೇ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿರುವ ಹರ್ಭಜನ್ಗೆ ವಿಶಿಷ್ಠವಾಗಿ ಗೆಳೆಯ ಯುವರಾಜ್ ಸಿಂಗ್ ವಿಶ್ ಮಾಡಿದ್ದಾರೆ. 40 ಅಥವಾ 47ನೇ ವರ್ಷದ ಹುಟ್ಟುಹಬ್ಬ ಎಂದಿರುವ ಯುವಿ, ಒಟ್ಟಿಗೆ ಆಡಿದ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಾ, ಕೆಲವೊಮ್ಮೆ ಪ್ಯಾಂಟ್ ಕೂಡ, ನಿಮ್ಮ ಬಗ್ಗೆ ಹೆಮ್ಮೆಯಿದೆ ಪಾಜಿ. ಹ್ಯಾವ್ ಎ ಗ್ರೇಟ್ ಡೇ, ಲವ್ ಯೂ ಪಾಜಿ ಎಂದು ಬಜ್ಜಿಗೆ ಶುಭಕೋರಿದ್ದಾರೆ. ಜತೆಗೆ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.
ದಿಗ್ಗಜ ಸಚಿನ್ ತೆಂಡುಲ್ಕರ್, ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ, ಮೊಹಮದ್ ಕೈಫ್, ಸುರೇಶ್ ರೈನಾ, ಸೇರಿದಂತೆ ಹಲವು ಮಂದಿ ಶುಭಕೋರಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಶುಭ ಹಾರೈಸಿದೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ಸಾಧನೆಯನ್ನು ಕೊಂಡಾಗಿದೆ.
ಹರ್ಭಜನ್ ಸಿಂಗ್, ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಕಬಳಿಸಿದ ಭಾರತದ ಮೊದಲ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ. 2001ರ ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹರ್ಭಜನ್ 3 ಪಂದ್ಯಗಳಿಂದ 32 ವಿಕೆಟ್ ಕಬಳಿಸಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ಜತೆಗೆ 4 ಬಾರಿ ಐಪಿಎಲ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಸದ್ಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಸಿಂಗ್ ತಂಡದ ಸದಸ್ಯರಾಗಿದ್ದಾರೆ.