

ಬೆಂಗಳೂರು: ತಮಿಳು, ತೆಲುಗು ಚಿತ್ರಗಳನ್ನು ನಿರ್ಮಿಸುವ ಬೃಹತ್ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ ಬ್ಯಾನರ್ನಡಿ ತಯಾರಾಗುತ್ತಿರುವ ಸ್ಯಾಂಡಲ್ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಸಿನಿಮಾದ ಚಿತ್ರೀಕರಣದ ಸೆಟ್‌ಗೆ ಯುವ ರಾಜ್ಕುಮಾರ್ ದಿಢೀರ್ ಭೇಟಿ ನೀಡಿದ್ದಾರೆ. ಈ ಭೇಟಿ ಇದೀಗ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ಹೊರಹೊಮ್ಮಲು ಸಜ್ಜಾಗಿರುವ ಯುವ ರಾಜ್ಕುಮಾರ್ ನಟನೆಯ 'ಯುವ' ಚಿತ್ರದ ಬಗ್ಗೆ ಕೂಡ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗುತ್ತಿದ್ದು, ಎರಡು ಹೊಸ ಚಿತ್ರಗಳ ಸ್ಟಾರ್ ನಟರು ಒಂದೇ ಸಿನಿಮಾದ ಸೆಟ್ಟಿನಲ್ಲಿ ಪರಸ್ಪರ ಭೇಟಿ ಮಾಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ಯುವ ರಾಜ್ಕುಮಾರ್ ಅಭಿನಯದ ಯುವ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಮಧ್ಯೆ ಬಿಡುವು ಮಾಡಿಕೊಂಡು ನಟ ನಿಖಿಲ್ ಅವರನ್ನು ಅವರ ಹೊಸ ಚಿತ್ರದ ಶೂಟಿಂಗ್ ಸೆಟ್ನಲ್ಲಿ ಭೇಟಿ ಮಾಡಿ, ಸಿನಿಮಾ ಕುರಿತಂತೆ ಹಲವು ಸಂಗತಿಗಳನ್ನು ಚರ್ಚಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಿಖಿಲ್, "ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಡೆಯುತ್ತಿರುವ ನನ್ನ ಹೊಸ ಸಿನಿಮಾದ ಶೂಟಿಂಗ್ ಸೆಟ್‌ಗೆ ನಟ ಯುವ ರಾಜ್ ಕುಮಾರ್ ಸರ್ಪ್ರೈಸ್ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಪರಸ್ಪರ ಸಿನಿಮಾಗಳ ಕುರಿತು ಸಾಕಷ್ಟು ಮಾಹಿತಿ ಹಂಚಿಕೊಂಡೆವು. ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರು ಉಪಸ್ಥಿತರಿದ್ದರು. ಈ ಭೇಟಿ ನಿಜಕ್ಕೂ ಖುಷಿ ಕೊಟ್ಟಿತು. ಆಲ್ ದ ಬೆಸ್ ಟೀಮ್ ಯುವ" ಎಂದು ತಿಳಿಸಿದ್ದಾರೆ.