ಬೋಲ್ಡ್​ ಆಗಿ ನಟಿಸಿದ ಮಾತ್ರಕ್ಕೆ… ಅಸಭ್ಯ ಪ್ರಶ್ನೆ ಕೇಳಿದ ಯೂಟ್ಯೂಬರ್​ಗೆ ನಟಿ ತನಿಶಾ ಕುಪ್ಪಂಡ ಕ್ಲಾಸ್​

Tanisha Kuppanda
ತನಿಶಾ ಕುಪ್ಪಂಡ
Published on

ಬೆಂಗಳೂರು: ಗುರು ದೇಶಪಾಂಡೆ ನಿರ್ಮಾಣ ಮತ್ತು ನಿರ್ದೇಶನದ ‘ಪೆಂಟಗನ್​’ ಸಿನಿಮಾದ ನಟಿ ತನಿಶಾ ಕುಪ್ಪಂಡ ಅವರ ಬಳಿ ಅಶ್ಲೀಲ ಪ್ರಶ್ನೆ ಕೇಳುವ ಮೂಲಕ ಯೂಟ್ಯೂಬರ್ ಓರ್ವ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾನೆ. ಪ್ರಶ್ನೆಯಿಂದ ಮುಜಗರಕ್ಕೀಡಾದ ನಟಿ ಮತ್ತು ಚಿತ್ರತಂಡ ಯೂಟ್ಯೂಬರ್​ನನ್ನು ತರಾಟೆಗೆ ತೆಗೆದುಕೊಂಡಿತು.

ಪೆಂಟಗನ್​ ಸಿನಿಮಾ ಏಪ್ರಿಲ್​ 7ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ನಟಿ​ ತನಿಶಾ ಕುಪ್ಪಂಡ ಅವರನ್ನು ಸಂದರ್ಶಿಸಲು ಯೂಟ್ಯೂಬರ್​ ಬಂದಿದ್ದ. ಸಿನಿಮಾ ಕುರಿತಾದ ಪ್ರಶ್ನೆಗಳು ಮಧ್ಯೆ ನೀವು ಬ್ಲೂ ಫಿಲ್ಮ್​ನಲ್ಲಿ ನಟಿಸುತ್ತಿರಾ? ಎಂದು ಯೂಟ್ಯೂಬರ್​ ನಟಿ ಪ್ರಶ್ನೆ ಮಾಡಿದ್ದಾರೆ.

ಯೂಟ್ಯೂಬರ್​ ಪ್ರಶ್ನೆಯಿಂದ ಕೆರಳಿದ ನಟಿ ತನಿಶಾ, ನಾನು ಬ್ಲೂ ಫಿಲ್ಮ್​ ಮಾಡೋ ಆಗಿದ್ರೆ ಕನ್ನಡ ಇಂಡಸ್ಟ್ರಿಗೆ ಯಾಕೆ ಬರಬೇಕಿತ್ತು. ಪೋರ್ನ್​ ಇಂಡಸ್ಟ್ರಿಗೆ ಹೋಗುತ್ತಿದ್ದೆ. ಸಿನಿಮಾದಲ್ಲಿ ಬೋಲ್ಡ್​ ಆಗಿ ನಟಿಸಿದ್ದೇವೆ ಅಂದ ಮಾತ್ರಕ್ಕೆ ಬ್ಲೂ ಫಿಲ್ಮ್​ ಮಾಡೋಕೆ ಆಗುತ್ತಾ? ಅದಕ್ಕೆ ಅಂತ ಪೋರ್ನ್​ ಸ್ಟಾರ್ಸ್​ ಇದ್ದಾರೆ. ನಾನೇನು ಪೋರ್ನ್​ ಸಿನಿಮಾ ನಾಯಕಿಯಾ? ನೀವೇಕೆ ಈ ರೀತಿಯ ಪ್ರಶ್ನೆ ಮಾಡುತ್ತೀರಿ? ಈ ರೀತಿಯಲ್ಲಿ ನೀವು ಕೇಳಬಾರದು. ಏನೇ ಪ್ರಶ್ನೆ ಮಾಡುವಾಗ ಕನಿಷ್ಠ ಜ್ಞಾನ ಇರಬೇಕು. ಕನ್ನಡ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡುತ್ತಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಗಳನ್ನು ಕೇಳುತ್ತೀರಿ? ಎಂದು ತನಿಶಾ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡರು.

ಈ ವೇಳೆ ಬಾಲಿವುಡ್​ ಹೆಸರೇಳಿದ ಯೂಟ್ಯೂಬರ್​ಗೆ ಮತ್ತೆ ಜಾಡಿಸಿದ ತನಿಶಾ, ಬಾಲಿವುಡ್​ನಲ್ಲಿ ಯಾರು ಬೆತ್ತಲೆಯಾಗಿ ನಟಿಸಿದ್ದಾರೆ. ನೀವು ಓರ್ವ ಕಲಾವಿದೆ ಜತೆ ಮಾತನಾಡುವಾಗ ಪ್ರಜ್ಞೆ ಇರಬೇಕು. ಯಾರು ಪೋರ್ನ್​ ಫಿಲ್ಮ್​ ಮಾಡುತ್ತಾರೆ ಅನ್ನೋ ಸಾಮಾನ್ಯ ತಿಳುವಳಿಕೆ ನಿಮಗೆ ಇಲ್ವಾ? ಎಂದು ತನಿಶಾ ತರಾಟೆಗೆ ತೆಗೆದುಕೊಂಡರು. ಇದಾದ ಬಳಿಕ ಪೆಂಟಗನ್​ ಚಿತ್ರತಂಡವು ಕೂಡ ಯೂಟ್ಯೂಬರ್​ಗೆ ಕ್ಲಾಸ್​ ತೆಗೆದುಕೊಂಡಿತು.

ಇನ್ನು ತನಿಷಾ ಅವರು ಪೆಂಟಗನ್​ ಹಾಡೊಂದರಲ್ಲಿ ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್​ ಈ ಪ್ರಶ್ನೆ ಕೇಳಿದ್ದಾರೆ. ಇದೀಗ ನಟಿ ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ‘ಪೆಂಟಗನ್’, ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ. ಈ ಚಿತ್ರವನ್ನು ನಿರ್ದೇಶಕ ಕಮ್ ಗುರು ದೇಶಪಾಂಡೆ ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಒಂದೊಂದು ಕಥೆಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರಗಳಲ್ಲಿ ಹಿರಿಯ ನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ದು, ಜಿ.ಅಕಾಡೆಮಿಯ ಒಂದಷ್ಟು ವಿದ್ಯಾರ್ಥಿಗಳು ಸಹ ಇದರಲ್ಲಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net