'ಯುವ ಪರಿವರ್ತನೆ ಯಾತ್ರೆ'ಗೆ ಹರಿಹರದಲ್ಲಿ ಸ್ವಾಗತ; 'ಜನಪರ ಆಡಳಿತಕ್ಕೆ ಜನರ ಜಾಗೃತಿ ಅತ್ಯಗತ್ಯ' ಎಂದ ಪಿ.ಜೆ. ಮಹಾಂತೇಶ್

HRR YATRE
Published on
ಹರಿಹರ: ಜನ ಸಾಮಾನ್ಯರ ವೇದಿಕೆಯಿಂದ ಬೀದರ್‌ನಿಂದ ಬೆಂಗಳೂರಿಗೆ ಹೊರಟಿರುವ ಯುವ ಪರಿವರ್ತನೆ ಯಾತ್ರೆ ಗುರುವಾರ ಹರಿಹರ ನಗರಕ್ಕೆ ಆಗಮಿಸಿದ್ದು, ಇಲ್ಲಿನ ಗಾಂಧಿ ವೃತ್ತದಲ್ಲಿ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಅವರು, ಜನರು ಜಾಗೃತವಾಗಿದ್ದರೆ ಮಾತ್ರ ಜನಪರ ಆಡಳಿತ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

"ಆಡಳಿತ ನಡೆಸುವ ಸರ್ಕಾರ ಯಾವುದೇ ಪಕ್ಷದ್ದಾಗಿರಲಿ, ಜನರು ಮೈಮರೆತರೆ ಸರ್ಕಾರ ಸಹಜವಾಗಿಯೇ ಶೋಷಣೆ ಮಾಡುತ್ತದೆ. ಸಂವಿಧಾನ ಮತ್ತು ಕಾನೂನುಗಳ ಅನ್ವಯ ಸರ್ಕಾರ ಆಡಳಿತ ನೀಡುತ್ತಿದೆಯೆ ಎಂಬುದನ್ನು ಪರೀಕ್ಷೆ ಮಾಡುವ ಜನರು ಇದ್ದರೆ, ಯಾವ ಸರ್ಕಾರವೂ ದುರಾಡಳಿತ ನಡೆಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು.

1,200 ಕಿ.ಮೀ. ಯಾತ್ರೆ: ನಾಡಿನ ಭವಿಷ್ಯಕ್ಕೆ ವೈಚಾರಿಕತೆ ಅಗತ್ಯ

ಯುವ ಪರಿವರ್ತನೆ ಯಾತ್ರೆಯನ್ನು ಶ್ಲಾಘಿಸಿದ ದ್ರಾವಿಡ ಕನ್ನಡಿಗರು ಚಳವಳಿಯ ಮುಖಂಡ, ಮಂಡ್ಯದ ಅಭಿಗೌಡ ಒಕ್ಕಲಿಗ ಮಾತನಾಡಿ, 1,200 ಕಿಲೋಮೀಟರ್ ದೂರದ ಈ ಯಾತ್ರೆ ಹಮ್ಮಿಕೊಂಡು ಯುವಕರು ಜನ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಯುವಕರು ಕ್ರಿಯಾಶೀಲತೆ ಹಾಗೂ ವೈಚಾರಿಕತೆಯನ್ನು ಬೆಳೆಸಿಕೊಂಡಲ್ಲಿ ಮಾತ್ರ ನಾಡಿಗೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.

ಯಾತ್ರೆಯ ಪ್ರಧಾನ ಸಂಚಾಲಕ, ಮುಧೋಳದ ಯಲ್ಲಪ್ಪ ಹೆಗಡೆ ಅವರು ಮಾತನಾಡಿ, ಈ ಯಾತ್ರೆಯ ಮುಖ್ಯ ಉದ್ದೇಶ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿದೆ. ಈ ಯಾತ್ರೆ ಅಕ್ಟೋಬರ್ 13 ರಂದು ಬೆಂಗಳೂರು ತಲುಪಲಿದೆ ಎಂದು ಹೇಳಿದರು.

ಅವರು ಮುಂದುವರೆದು, "ಧರ್ಮ, ಜಾತಿ, ಪಕ್ಷದ ಹಂಗು ತೊರೆದು ಯುವಕರು, ರೈತರು, ಕಾರ್ಮಿಕರು, ಮಹಿಳೆಯರು ಒಂದಾದರೆ, ಯಾವ ಸರ್ಕಾರವೂ ಜನ ವಿರೋಧಿ ಆಡಳಿತ ನಡೆಸಲು ಸಾಧ್ಯವಿಲ್ಲ. ಇದನ್ನು ಸಾಬೀತುಪಡಿಸಲು ಯಾತ್ರೆ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ," ಎಂದು ಸ್ಪಷ್ಟಪಡಿಸಿದರು.

ಹರಿಹರದಲ್ಲಿ ನಡೆದ ಈ ಸ್ವಾಗತ ಕಾರ್ಯಕ್ರಮದಲ್ಲಿ ಯಲ್ಲಪ್ಪ ಹೆಗಡೆ, ಪಿ.ಜೆ. ಮಹಾಂತೇಶ್ ಮತ್ತು ಅಭಿಗೌಡ ಒಕ್ಕಲಿಗ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net