ಕರ್ತವ್ಯಪ್ರಜ್ಞೆ ಜಾಗೃತಿಯಿಂದ ಪ್ರಪಂಚ ಸುಂದರ: ಸುಬ್ರಹ್ಮಣ್ಯ ಶ್ರೀ

udp-22-yuva
Published on

ಉಡುಪಿ: ಪ್ರತಿಯೊಬ್ಬರಲ್ಲಿಯೂ ಕರ್ತವ್ಯಪ್ರಜ್ಞೆ ಜಾಗೃತವಾಗಿದ್ದರೆ ಪ್ರಪಂಚ ಸುಂದರವಾಗಿರುತ್ತದೆ. ಗೀತೆಯ ಮೂಲಕ ಮನುಷ್ಯನಲ್ಲಿ ಕರ್ತವ್ಯ ಪ್ರಜ್ಞೆ ಬೆಳೆಸುವುದು ಕೃಷ್ಣನ ಉದ್ದೇಶವಾಗಿದೆ. ಕರ್ಮರಹಿತನಾಗಿ ಮನುಷ್ಯ ಬದುಕಲು ಸಾಧ್ಯವಿಲ್ಲ. ಹೀಗಾಗಿ ತನಗೆ ವಿಹಿತವಾದ ಕರ್ಮ ಮಾಡಲೇಬೇಕು. ಭಗವಂತನಲ್ಲಿ ಭಕ್ತಿ ಮತ್ತು ಕರ್ತವ್ಯ ಪ್ರಜ್ಞೆಯಿಂದ ಸಮಾಜಮುಖಿಯಾಗಿ ಬದುಕಲು ಸಾಧ್ಯ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣ ಮಠದ ರಾಜಾಂಗಣದಲ್ಲಿ ಬೃಹತ್​ ಗೀತೋತ್ಸವದ ಅಂಗವಾಗಿ ಭಾನುವಾರ ಯುವ ಗೀತೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕುರಿತು ನಡೆದ ಒಂದು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭಗವಂತನಿಗೆ ಅರ್ಪಣೆ ಮಾಡುವ ವಸ್ತು ಸಾತ್ವಿಕವಾಗಿರಬೇಕು. ಹೀಗಾಗಿ ಜೀವನವನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ಭಗವದ್ಗೀತೆ ಪುಸ್ತಕವಿರಬೇಕು. ಸರಳವಾದ ಅರ್ಥವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಈ ಮೂಲಕ ಗೀತೆಯನ್ನು ಆತ್ಮಸಾತ್​ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲೇ ಸಮಯವನ್ನು ಕಳೆಯದೆ ಪಾರಮಾರ್ಥಿಕ ಚಿಂತನೆಯನ್ನೂ ಯುವ ಜನತೆ ಬೆಳೆಸಿಕೊಳ್ಳಬೇಕು ಎಂದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಯುವ ಲೇಖಕರಾದ ವಿದ್ವಾನ್​ ಕೃಷ್ಣರಾಜ ಕುತ್ಪಾಡಿ, ರೋಹಿತ್​ ಚಕ್ರತಿರ್ಥ, ಡಾ. ವಿಶ್ವನಾಥ ಸುಂಕಸಾಳ, ನಚಿಕೇತ್​ ಹೆಗಡೆ, ಡಾ. ನವೀನ್​ ಗಂಗೋತ್ರಿ, ಮುಂಬೈ ಉದ್ಯಮಿಗಳಾದ ದಿನೇಶ್​ ಕುಲಾಲ್​, ಸುಭಾಷ್​ ಶೆರಿಯಾರ್​, ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ವಿದ್ವಾನ್​ ಮಹಿತೋಷ್​ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net