

ಬೆಂಗಳೂರು: ಬೆಂಗಳೂರು: ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ‘ವಿಜಯವಾಣಿ’ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿ.ವಿ. ಪುರದ ಬೆಂಗಳೂರು ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ (ಬಿಐಟಿ) ಹಾಗೂ ಹನುಮಂತನಗರದ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
‘ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರ’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾಮಾಜಿಕ ಮಾಧ್ಯಮಗಳು, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಗಮನದಲ್ಲಿರಿಸಿಕೊಂಡು ಪ್ರಬಂಧ ಬರೆಯುವಂತೆ ಸೂಚಿಸಲಾಗಿತ್ತು. ನಗರದ ಹಲವು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಬಿಐಟಿ ಕಾಲೇಜಿನ ಇಸಿಇ ಬ್ರಾಂಚ್‌ನ ಕಿರಣ್ ಬಸವರಾಜ ಸಾಲಿಮಠ ಅವರ ಪ್ರಬಂಧ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ. ಪಿಇಎಸ್ ಕಾಲೇಜಿನ ಬಿ.ಟೆಕ್. ಸಿಎಸ್‌ಇ ವಿದ್ಯಾರ್ಥಿ ಸಾಯಿಗಣೇಶ್ ದ್ವಿತೀಯ ಹಾಗೂ ಬಿಐಟಿ ಕಾಲೇಜಿನ ಬಿ.ಎಸ್. ಯಶ್ವಂತ್ ಗೌಡ ತೃತೀಯ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಡಾ. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿಎಸ್‌ಇ ವಿದ್ಯಾರ್ಥಿ ಪೂಜಾ ಯಶವಂತ ಪಾಟೀಲ್ ಮತ್ತು ಬಿಐಟಿಯ ಎಂಸಿಎ ವಿದ್ಯಾರ್ಥಿನಿ ಪಿ. ಅರ್ಚನಾ ಅವರ ಪ್ರಬಂಧಗಳು ತೀರ್ಪುಗಾರರಿಂದ ಮೆಚ್ಚುಗೆ ಗಳಿಸಿವೆ. ಪ್ರಥಮ ಬಹುಮಾನಕ್ಕೆ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 2 ಸಾವಿರ ರೂ. ನಗದು, ಮೆಚ್ಚುಗೆ ಬಹುಮಾನಕ್ಕೆ ತಲಾ 500 ರೂ. ಹಾಗೂ ಪ್ರಶಸ್ತಿ ಪತ್ರ ಇರಲಿದೆ.
ಪ್ರಬಂಧ ಸ್ಪರ್ಧೆಯು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧೆ ಶುಕ್ರವಾರ (ಜ.10) ಹನುಮಂತನಗರದ ಪಿಇಎಸ್ ಕಾಲೇಜು ಮತ್ತು ವಿ.ವಿ. ಪುರದ ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ (ಬಿಐಟಿ) ಆವರಣದಲ್ಲಿ ನಡೆದಿತ್ತು.
ಸಾಮಾಜಿಕ ಮಾಧ್ಯಮಗಳು, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳ ಹಿನ್ನೆಲೆಯಲ್ಲಿ ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರವೇನು ಎಂಬ ವಿಚಾರದಲ್ಲಿ ವಿದ್ಯಾರ್ಥಿಗಳ ಪ್ರಬಂಧ ಮಂಡನೆ ಶೈಲಿ, ವಿಷಯ ನಿರೂಪಣೆ, ಕೈಬರಹ, ಉದಾಹರಣೆ, ಸಮಸ್ಯೆಗಳು ಹಾಗೂ ಪರಿಹಾರ, ಅನುಷ್ಠಾನದ ಉಪಯೋಗ ಇತ್ಯಾದಿ ಅಂಶಗಳನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲಿ ಬಹುಮಾನ ವಿತರಣೆಯ ದಿನಾಂಕ ಮತ್ತು ಸ್ಥಳವನ್ನು ತಿಳಿಸಲಾಗುವುದು.