

ವಿಜಯವಾಣಿ ಸುದ್ದಿಜಾಲ ಆರ್ಡಿ
ಅರಸಮ್ಮಕಾನು ನವಶಕ್ತಿ ಯುವಕ ಮಂಡಲವು ಸಂಘಟಿತ ಯುವಕರ ತಂಡದೊಂದಿಗೆ ಜನರಿಗೆ ನೆರವು ನೀಡುವ ಸಾಮಾಜಿಕ ಸೇವೆಯೊಂದಿಗೆ ಮಾದರಿಯಾಗಿದೆ. ಪ್ರತಿ ಗ್ರಾಮಕ್ಕೊಂದು ಇಂತಹ ಯುವಕ ಮಂಡಲದ ಅಗತ್ಯವಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.
ಶೇಡಿಮನೆ ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ನವಶಕ್ತಿ ಯುವಕ ಮಂಡಲದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಧುಮೇಹ, ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅರಸಮ್ಮಕಾನು ನವಶಕ್ತಿ ಯುವಕ ಮಂಡಲ ಅಧ್ಯಕ್ಷ ಪ್ರಶಾಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಶಿಬಿರದ ಆಯೋಜಕ ಯು.ಶಂಕರ ಶೆಟ್ಟಿ, ನೇತ್ರ ತಜ್ಞ ಡಾ.ಮನೋಜ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜಿ., ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶಾಲಿನಿ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯ ಶೆಟ್ಟಿ ಶೇಡಿಮನೆ, ಅರಸಮ್ಮಕಾನು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ನಾಗರಾಜ ಬಾಯರಿ ಗಂಗಡಬೈಲು, ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ಆಚಾರ್ಯ ಉಪಸ್ಥಿತರಿದ್ದರು.
ನವಶಕ್ತಿ ಯುವಕ ಮಂಡಲ ಅಧ್ಯಕ್ಷ ಪ್ರಶಾಂತ್ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಕೀರ್ತಿ ಕುಮಾರ್ ಶೆಟ್ಟಿ ನಿರೂಪಿಸಿದರು, ಪ್ರದೀಪ್ ಹೆಗ್ಡೆ ವಂದಿಸಿದರು.
ಶಿಬಿರದಲ್ಲಿ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. 12 ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹಾಗೂ 96 ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.