

ವಿಜಯಪುರ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಮಾಯಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಜನಾಕ್ರೋಶ ಭುಗಿಲೇಳುತ್ತಿದೆ. ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಜ. 17ರಂದು ನಿಂತಿದ್ದ 22ರ ಹರೆಯದ ಯುವತಿಯನ್ನು ಯಾಮಾರಿಸಿ ಕರೆದುಕೊಂಡು ಹೋದ ಮೂವರು ಕಿರಾತಕರು ಹೊಡೆದು, ಜೀವ ಬೆದರಿಕೆ ಹಾಕಿ, ಮೈಮೇಲಿನ ಬಟ್ಟೆ ಬಿಚ್ಚಿಸಿ ಅದರಲ್ಲೊಬ್ಬ ಅತ್ಯಾಚಾರ ನಡೆಸಿದ್ದಾನೆ. ದೈಹಿಕವಾಗಿ ನೋವಾಗಿ ತಲೆ ಸುತ್ತು ಬಂದು ಯುವತಿ ಬೀಳುತ್ತಿದ್ದಂತೆ ಕಿರಾತಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪ್ರಕರಣದ ವಿವರ: ತನ್ನೂರಿಗೆ ಹೋಗಲೆಂದು ರಾತ್ರಿ 1ರ ಸುಮಾರಿಗೆ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತ ಯುವತಿ ನಿಂತಿದ್ದಾಳೆ. ಬೈಕ್ ಮೇಲೆ ಬಂದ ಮೂವರು ‘ಇಲ್ಲಿ ಬಸ್ ಬರುವುದಿಲ್ಲ ತಂಗಿ, ನಾವು ನಿನಗೆ ಹೊಸ ಬಸ್ ನಿಲ್ದಾಣಕ್ಕೆ ಬಿಡುತ್ತೇವೆ, ಅಲ್ಲಿ ಬಸ್ ಬರುತ್ತವೆ’ ಎಂದು ಫುಸಲಾಯಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ಸ್ಯಾಟ್ಲೈಟ್ ಬಸ್ ನಿಲ್ದಾಣ ಬಳಿಯ ಕಾಯಿಪಲ್ಲೆ ಮಾರುವ ಜಾಗೆಗೆ ಕರೆದುಕೊಂಡು ಹೋಗಿ ಮೈಮೇಲಿನ ಬಟ್ಟೆ ಬಿಚ್ಚು ಎಂದು ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಅದರಲ್ಲೊಬ್ಬ ದೈಹಿಕ ಸಂಪರ್ಕ ಮಾಡುತ್ತಿದ್ದಂತೆ ಯುವತಿ ನೋವಾಗಿ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಆಗ ಕರೆತಂದವರು ಬೈಕ್ ಮೇಲೆ ಕಾಲ್ಕಿತ್ತಿದ್ದಾರೆ.
ಯುವತಿಯ ಸ್ಥಿತಿ ಕಂಡ ಸಾರ್ವಜನಿಕರು ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ. ಘಟನೆಯಿಂದ ಭಯಭೀತಗೊಂಡಿರುವ ಯುವತಿ ಅಸ್ಪಷ್ಟವಾಗಿ ಮಾತನಾಡುತ್ತಿದ್ದಾಳಲ್ಲದೇ ವಿಷಯ ಬಹಿರಂಗ ಪಡಿಸದಂತೆ ಆರಂಭದಲ್ಲಿ ಮನವಿ ಮಾಡಿದ್ದಾಳೆ. ಆದರೆ, ಸಾರ್ವಜನಿಕರು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಇಲಾಖೆ ಕೂಡಲೇ ಆ ಕಿರಾತಕರನ್ನು ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.