ಕಾರ್ಕಳ: ಬದುಕಿಗೆ ಅಗತ್ಯವಾಗಿ ಬೇಕಾದ ಅನ್ನವನ್ನು ಯಾವ ತಂತ್ರಜ್ಞಾನದಿಂದಲೂ ಪಡೆಯಲು ಸಾಧ್ಯವಿಲ್ಲ. ಸಾವಯವ ಕೃಷಿ ಅನುಸರಿಸುವ ಮೂಲಕ ಮಣ್ಣಿನ ಫಲವತ್ತತೆ, ಜನರ ಆರೋಗ್ಯ ಕಾಪಾಡಲು ನೆರವಾಗುತ್ತದೆ. ಕೃಷಿ ಇಂದು ಲಾಭದಾಯಕ ಉದ್ಯೋಗವಾಗಿದ್ದು ವಿದ್ಯಾರ್ಥಿಗಳು ಕೃಷಿಯತ್ತ ಆಸಕ್ತಿ ವಹಿಸಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸಾಹಿತ್ಯ ಖುಷಿ ಸಾವಯವ ಕೃಷಿ ಎಂಬ ಸಾಹಿತ್ಯ ನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಎನ್.ಎಂ.ಹೆಗಡೆ ಮಾತನಾಡಿ, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ, ಕೀಟನಾಶಕಗಳ ಬಳಕೆಯಿಂದ ಭೂಮಿ ಬರಡುಗಾಗುತ್ತಿದ್ದು ಸಾವಯವ ಕೃಷಿಯಿಂದ ಮಾತ್ರ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ಸಂಚಾಲಕ ಸಂದೀಪ್ ವಿ.ಪೂಜಾರಿ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ವಸಂತ ಆಚಾರ್, ಪ್ರೌಢಶಾಲಾ ಹಿರಿಯ ಶಿಕ್ಷಕ ಗೋಪಾಲ್ ಉಪಸ್ಥಿತರಿದ್ದರು.
ಬಹುಮಾನ ವಿತರಣೆ, ಸನ್ಮಾನ
ಪ್ರಗತಿಪರ ಕೃಷಿಕರಾದ ರೇವತಿ ಸುಧಾಕರ ಶೆಟ್ಟಿ ಹಾಗೂ ಇತ್ತೀಚೆಗೆ ಬೆಳ್ಮಣ್ ಪದವಿ ಪೂರ್ವ ಕಾಲೇಜಿನಿಂದ ಪಲಿಮಾರು ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆಗೊಂಡ ಸಾಹಿತಿ ಮತ್ತು ಉಪನ್ಯಾಸಕಿ ಶುಭಲಕ್ಷ್ಮೀ ಆರ್.ನಾಯಕ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರಿಸರ ಗೀತೆ ಸ್ಪರ್ಧೆ ಮತ್ತು ಸಾವಯುವ ಕೃಷಿ ಬಗ್ಗೆ ಪ್ರಬಂಧ ಸ್ಪರ್ಧೆ, ಸ್ವಚ್ಛತಾ ಆಂದೋಲನದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.