ನೀವು ದಿ ಬೆಂಗಾಲ್ ಫೈಲ್ಸ್‌ಗೆ ಸೆಲ್ಯೂಟ್ ಮಾಡುತ್ತೀರಿ: ಬಂಗಾಳದಲ್ಲಿ ಸಿನಿಮಾ ನಿಷೇಧಿಸದಂತೆ ಸಿಎಂ ಮಮತಾಗೆ ಮನವಿ ಮಾಡಿದ ವಿವೇಕ್​​ ಅಗ್ನಿಹೋತ್ರಿ | The Bengal Files

Bengal Files 02
Published on

The Bengal Files: ಇದೆ ಸೆಪ್ಟೆಂಬರ್​ 5 ರಂದು ಪಶ್ಚಿಮ ಬಂಗಾಳದಲ್ಲಿ ದಿ ಬೆಂಗಾಲ್ ಫೈಲ್ಸ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಸಿನಿಮಾಕ್ಕೆ ಯಾವುದೇ ಅಡ್ಡಿ ಮಾಡದಂತೆ ಬಾಲಿವುಡ್​ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಮಂಗಳವಾರ (ಸೆಪ್ಟೆಂಬರ್​,02) ಮನವಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಮಮತಾರನ್ನು ಉದ್ದೇಶಿಸಿ ವಿಡಿಯೋ ಹಂಚಿಕೊಂಡಿರುವ ವಿವೇಕ್, ಥಿಯೇಟರ್ ಮಾಲೀಕರು ನನಗೆ ಹೇಳುತ್ತಿರುವುದು, ಚಿತ್ರ ನಿಷೇಧಿಸದಿದ್ದರೂ, ರಾಜಕೀಯ ಒತ್ತಡ ತುಂಬಾ ಇರುವುದರಿಂದ ಸಿನಿಮಾವನ್ನು ಪ್ರದರ್ಶಿಸಲು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದರಿಂದ ಥಿಯೇಟರ್ ಮಾಲೀಕರು ಚಿತ್ರವನ್ನು ಪ್ರದರ್ಶಿಸಲು ಹೆದರುತ್ತಿದ್ದಾರೆ. ಟಿಎಂಸಿಯ ಪಕ್ಷದ ಕಾರ್ಯಕರ್ತರು ಕೂಡ ಈ ಚಿತ್ರವನ್ನು ನಿಷೇಧಿಸುವಂತೆ ಕೇಳುತ್ತಿದ್ದಾರೆ. ಇದಕ್ಕಾಗಿಯೇ ಈ ಚಿತ್ರವನ್ನು ಪಶ್ಚಿಮ ಬಂಗಾಳದಲ್ಲಿ ಶಾಂತಿಯುತವಾಗಿ ಬಿಡುಗಡೆ ಮಾಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಚಿತ್ರ ನಿರ್ಮಾಪಕರು ಸಿಎಂ ಮಮತಾಗೆ ವಿನಂತಿಸಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ವಿವೇಕ್​, ನೀವು ಭಾರತೀಯ ಸಂವಿಧಾನದ ಪ್ರತಿಜ್ಞೆ ಮಾಡಿದ್ದೀರಿ ಮತ್ತು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು, ಭಾರತದ ಜನರ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುತ್ತೀರಿ. ಸಿಬಿಎಫ್‌ಸಿ ಈ ಚಿತ್ರವನ್ನು ಅಂಗೀಕರಿಸಿದೆ. ಇದು ಸಾಂವಿಧಾನಿಕ ಸಂಸ್ಥೆಯಾಗಿದೆ. ಇದಕ್ಕಾಗಿಯೇ ಈ ಚಿತ್ರವನ್ನು ಶಾಂತಿಯುತವಾಗಿ ಬಿಡುಗಡೆ ಮಾಡುವುದು ನಿಮ್ಮ ಸಾಂವಿಧಾನಿಕ ಕರ್ತವ್ಯ ಎಂದು ಬ್ಯಾನರ್ಜಿ ಅವರಿಗೆ ತಿಳಿಸಿದ್ಧಾರೆ.

ಪಶ್ಚಿಮ ಬಂಗಾಳದಲ್ಲಿ ಚಿತ್ರ ಬಿಡುಗಡೆ ಆಗಬೇಕು ಎಂದು ವಿವರಿಸಿದ ಅಗ್ನಿಹೋತ್ರಿ, ಭಾರತವು ದೀರ್ಘಕಾಲದವರೆಗೆ ತುಳಿತಕ್ಕೊಳಗಾದ ಮತ್ತು ಗುಲಾಮಗಿರಿಗೆ ಒಳಗಾದ ದೇಶ. 1200 ವರ್ಷಗಳಿಂದ ನಮ್ಮ ಸಂಸ್ಕೃತಿ, ಧರ್ಮ, ಸಾಹಿತ್ಯ, ಕಲೆ, ವಾಸ್ತುಶಿಲ್ಪವನ್ನು ನಾಶಪಡಿಸಲಾಯಿತು.ಅಲ್ಲದೆ, ಬಂಗಾಳದ ಅತ್ಯಂತ ಭಯಾನಕ ಮತ್ತು ನೋವಿನ ಅಧ್ಯಾಯವಿದೆ. ಇಲ್ಲಿ ಡೈರೆಕ್ಟ್ ಆಕ್ಷನ್ ಡೇಯನ್ನು ಹಿಂದೂ ನರಮೇಧ ನಡೆಯಿತು. ಇದು ಸಂಭವಿಸದಿದ್ದರೆ, ಬಹುಶಃ ಭಾರತ ವಿಭಜನೆಯಾಗುತ್ತಿರಲಿಲ್ಲ. ಆದರೆ ಇದೆಲ್ಲವನ್ನೂ ಮರೆತುಬಿಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಬಂಗಾಳ ಎರಡು ಬಾರಿ ವಿಭಜನೆಯಾದ ಏಕೈಕ ರಾಜ್ಯ. 1905 ರಲ್ಲಿ ಮತ್ತು ನಂತರ 1947 ರಲ್ಲಿ. ಬಂಗಾಳದಷ್ಟು ತ್ಯಾಗವನ್ನು ಯಾರೂ ಮಾಡಿಲ್ಲ. ಆದರೆ ಇಂದಿನ ಪೀಳಿಗೆಗೆ ಇದು ತಿಳಿದಿದೆಯೇ? ನೀವು ರಾಜಕೀಯ ಕ್ಷೇತ್ರವನ್ನು ಮೀರಿ, ನಿಜವಾದ ಭಾರತೀಯನಂತೆ, ನಿಜವಾದ ಬಂಗಾಳಿಯಂತೆ ಯೋಚಿಸಿದರೆ, ನೀವು ಈ ಚಿತ್ರವನ್ನು ನಿಷೇಧಿಸುವುದಿಲ್ಲ. ನೀವು ಅದನ್ನು ಸೆಲ್ಯೂಟ್ ಮಾಡುತ್ತೀರಿ. ಮುಸ್ಲಿಂ, ಕ್ರಿಶ್ಚಿಯನ್, ದಲಿತ ಅಥವಾ ಮಹಿಳೆಯರ ಕಿರುಕುಳದ ಬಗ್ಗೆ ಚಲನಚಿತ್ರಗಳನ್ನು ಮಾಡಲು ಸಾಧ್ಯವಾದಾಗ, ಹಿಂದೂ ಇತಿಹಾಸದ ಕರಾಳ ಅಧ್ಯಾಯ, ಹಿಂದೂ ನರಮೇಧದ ಕರಾಳ ಅಧ್ಯಾಯವನ್ನು ಏಕೆ ಮಾಡಬಾರದು?" ಎಂದು ವಿವೇಕ್ ಪ್ರಶ್ನಿಸಿದ್ದಾರೆ.

ಈ ಚಿತ್ರವು ಯಾವುದೇ ಸಮುದಾಯದ ವಿರುದ್ಧವಲ್ಲ, ಬದಲಾಗಿ ಮಾನವೀಯತೆಯ ವಿರುದ್ಧ ವರ್ತಿಸುವವರ ವಿರುದ್ಧ ಎಂದು ವಿವೇಕ್ ಸ್ಪಷ್ಟಪಡಿಸಿದರು. ಚಿತ್ರವನ್ನು ನಿಷೇಧಿಸುವುದು ಎಂದರೆ ಹಿಂದೂ ನರಮೇಧಗಳ ಸತ್ಯವನ್ನು ನಿಷೇಧಿಸುವುದು ಎಂದರ್ಥ ಎಂದು ವಿವೇಕ್ ಬಂಗಾಳ ಸಿಎಂರಿಗೆ ಒತ್ತಿ ಹೇಳಿದರು.

ಆದ್ದರಿಂದ ನಾನು ನಿಮಗೆ ಮನವಿ ಮಾಡುತ್ತೇನೆ, ದಯವಿಟ್ಟು ಈ ಚಿತ್ರವನ್ನು ನಿಷೇಧಿಸಬೇಡಿ. ಈ ಚಿತ್ರವನ್ನು ನೋಡಿ, ಅರ್ಥಮಾಡಿಕೊಳ್ಳಿ, ಚರ್ಚಿಸಿ, ಆದರೆ ಸತ್ಯವನ್ನು ಮರೆಮಾಡಬೇಡಿ. ನಾವು ಡೈರೆಕ್ಟ್ ಆಕ್ಷನ್ ಡೇ ಮತ್ತು ನೋಖಾಲಿಯ ಕಥೆಯನ್ನು ಹೇಳದಿದ್ದರೆ, ಯಾರು ಹೇಳುತ್ತಾರೆ? ನಾವು ಈಗ ಹೇಳದಿದ್ದರೆ, ನಾವು ಯಾವಾಗ ಹೇಳುತ್ತೇವೆ? ಆದರೂ, ಹಿಂದೂ ಇತಿಹಾಸ, ಹಿಂದೂ ನರಮೇಧದ ಬಗ್ಗೆ ಸತ್ಯವನ್ನು ಹೇಳುವುದು ಭಾರತದಲ್ಲಿ ಪಾಪ ಎಂದು ನೀವು ಭಾವಿಸಿದರೆ, ಹೌದು, ನಾನು ಪಾಪಿ. ನೀವು ಬಯಸಿದಂತೆ ನನ್ನನ್ನು ಶಿಕ್ಷಿಸಬಹುದು ಎಂದು ತಿಳಿಸಿದ್ದಾರೆ.

ದಿ ಬೆಂಗಾಲ್ ಫೈಲ್ಸ್

ಈ ಚಿತ್ರವು ಪಶ್ಚಿಮ ಬಂಗಾಳದ ಹಿಂಸಾತ್ಮಕ ರಾಜಕೀಯ ಭೂತಕಾಲದ ರಕ್ತಸಿಕ್ತ ಇತಿಹಾಸದ ಹಿನ್ನೆಲೆಯ ವಿರುದ್ಧ ಹೆಣೆಯಲ್ಪಟ್ಟಿದೆ. ಇದು ನೈಜ ಘಟನೆಗಳು ಮತ್ತು ಸಾಕ್ಷ್ಯಗಳಿಂದ ಪ್ರಸ್ತುತಪಡಿಸುತ್ತದೆ, ಭಾರತದ ಮುಖ್ಯವಾಹಿನಿಯ ಚರ್ಚೆಯಲ್ಲಿ ಚರ್ಚಿಸದ ಬಂಗಾಳದಲ್ಲಿನ ಹಿಂಸಾಚಾರದ ಬಗ್ಗೆ ಕೇಂದ್ರೀಕರಿಸುತ್ತದೆ.

ಬೆಂಗಾಲ್ ಫೈಲ್ಸ್​​ನಲ್ಲಿ ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಅನುಪಮ್ ಖೇರ್, ಸಿಮ್ರತ್ ಕೌರ್ ಮತ್ತು ದರ್ಶನ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net