'ಕರೊನಾ ವಿಚಾರದಲ್ಲಿ ನಮ್ಮ ಬಗ್ಗೆ ಜೋಕ್​ ಮಾಡಿದಿರಲ್ಲ...ನೋಡಿ ಈಗ, ನಿಮಗೇ ಕರೊನಾ ಬಂದಿದೆ...'

Madhyapradesh CM
Published on

ಭೂಪಾಲ್​: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​ ಅವರಲ್ಲಿ ಕರೊನಾ ಸೋಂಕು ದೃಢಪಡುತ್ತಿದ್ದಂತೆ, ಮಾಜಿ ಸಿಎಂ ಕಮಲನಾಥ್​ ಅವರು ಸರಣಿ ಟ್ವೀಟ್​ ಮಾಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕಮಲನಾಥ್​, ಶಿವರಾಜ್​ ಜೀ..ನಿಮಗೆ ಕರೊನಾ ತಗುಲಿದೆ ಎಂದು ಕೇಳಿ ನನಗೆ ನೋವಾಗುತ್ತಿದೆ. ನೀವು ಶೀಘ್ರವೇ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಭವನಕ್ಕೆ ಕರೆದೊಯ್ಯುವೆ, ಪ್ರಧಾನಿ ನಿವಾಸದೆದುರು ಪ್ರತಿಭಟನೆಗೂ ಸಿದ್ಧ; ಬಗೆಹರಿಯದ ರಾಜಸ್ಥಾನ ಬಿಕ್ಕಟ್ಟು

ನಾವು ಕಾಂಗ್ರೆಸ್​​ನವರೆಲ್ಲ ಕೊವಿಡ್​-19 ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸಿದಾಗ ನೀವು ನಮ್ಮನ್ನು ಟೀಕಿಸಿದ್ದಿರಿ. ಕಾಂಗ್ರೆಸ್​ನವರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಕರೊನಾ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ. ಕೊವಿಡ್​-19 ಪರಿಸ್ಥಿತಿಯನ್ನೇ ತಂತ್ರವನ್ನಾಗಿಸಿಕೊಂಡಿದ್ದಾರೆ ಎಂದು ಅಂದು ನಮಗೆ ಹೇಳಿದ್ದಿರಿ ಎಂದು ಕಮಲನಾಥ್​ ತಿರುಗೇಟು ನೀಡಿದ್ದಾರೆ.

ಶಿವರಾಜ್​ ಸಿಂಗ್​ ಚೌಹಾಣ್​ ಅವರು ಇಂದು ಬೆಳಗ್ಗೆ ಟ್ವೀಟ್​ ಮಾಡಿ, ತಮಗೆ ಕರೊನಾ ಸೋಂಕು ತಗುಲಿದ್ದನ್ನು ತಿಳಿಸಿದ್ದರು. ಹಾಗೇ, ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಲ್ಲರೂ ಹೋಗಿ ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಅದಾದ ಕೆಲವೇ ಹೊತ್ತಲ್ಲಿ ಕಮಲನಾಥ್​ ಅವರು ಟ್ವೀಟ್ ಮೂಲಕ ಮುಖ್ಯಮಂತ್ರಿಯ ಕಾಲೆಳೆದಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಆಗಸ್ಟ್​​ನಲ್ಲಿ ಸಿನಿಮಾ ಥಿಯೇಟರ್​ ತೆರೆಯಲು ಸಿದ್ಧತೆ; ಮಾಲೀಕರೇ ಒಪ್ಪುತ್ತಿಲ್ಲ…!

ಶಿವರಾಜ್ ಅವರೇ, ನೀವೂ ಸಹ ಕೊವಿಡ್​-19ಗೆ ಸಂಬಂಧಪಟ್ಟ ಶಿಷ್ಟಾಚಾರಗಳನ್ನು ಪಾಲನೆ ಮಾಡುವ ಮೂಲಕ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದಿತ್ತು. ಆದರೆ ನೀವು ನಮ್ಮ ಬಗ್ಗೆ ಜೋಕ್​ ಮಾಡುವುದರಲ್ಲೇ ಕಾಲ ಕಳೆದಿರಿ. ಈಗ ನೋಡಿ ನಿಮಗೂ ಕರೊನಾ ತಗುಲಿದೆ. ಏನೇ ಆದರೂ ಗುಣಮುಖರಾಗಿ ಶೀಘ್ರದಲ್ಲೇ ಕೆಲಸದಲ್ಲಿ ತೊಡಗಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

ಇನ್ನು ತಾವು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಕರೊನಾ ವೈರಸ್​ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದೇವೆ. ನನ್ನ ಅನುಪಸ್ಥಿತಿಯಲ್ಲಿ, ಕರೊನಾ ಪರಿಸ್ಥಿತಿ ಪರಿಶೀಲನಾ ಸಭೆಯನ್ನು ಗೃಹ ಸಚಿವ ನರೋತ್ತಮ್​ ಮಿಶ್ರಾ, ನಗರಾಭಿವೃದ್ಧಿ ಮತ್ತು ಆಡಳಿತ ಸಚಿವ ಭೂಪೇಂದ್ರ ಸಿಂಗ್​, ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್​ ಸಾರಂಗ್​ ಮತ್ತು ಆರೋಗ್ಯ ಸಚಿವ ಪ್ರಭುರಾಮ್​ ಚೌಧರಿ ನಡೆಸಲಿದ್ದಾರೆ ಎಂದು ಶಿವರಾಜ್​ ಚೌಹಾಣ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net