ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಮೊದಲ ಆರೋಪಿ ಕೊಲೆಗೆ ಸಿದ್ಧವಾಗಿತ್ತೆ ಸ್ಕೆಚ್?

chandrashekhara indi- vinay kulakani mava
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್​ಗೌಡ ಹತ್ಯೆ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿಯನ್ನೇ ಕೊಲೆ ಮಾಡುವ ಮೂಲಕ ಸಾಕ್ಷ್ಯ ನಾಶ ಮಾಡಲು ಮಾಜಿ ಸಚಿವ ವಿನಯ ಕುಲಕರ್ಣಿ ಭಾರಿ ಪ್ಲ್ಯಾನ್ ಮಾಡಿದ್ದರು ಎಂಬ ರಣರೋಚಕ ಸಂಗತಿಯನ್ನು ಸಿಬಿಐ ಅಧಿಕಾರಿಗಳು ತನಿಖೆ ವೇಳೆ ಪತ್ತೆ ಮಾಡಿರುವುದಾಗಿ ತಿಳಿದುಬಂದಿದೆ.

ಹಿಂದೆ ಪ್ರಕರಣವನ್ನು ಧಾರವಾಡ ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಬಸವರಾಜ ಮುತ್ತಗಿ ಮೊದಲ ಆರೋಪಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಪ್ರಕರಣವನ್ನು ಸಿಬಿಐಗೆ ವಹಿಸಿತು. ಸಿಬಿಐ ಅಧಿಕಾರಿಗಳು ಧಾರವಾಡಕ್ಕೆ ಬಂದು ಮುತ್ತಗಿಯನ್ನು ಹಲವು ಬಾರಿ ವಿಚಾರಣೆಗೆ ಗುರಿಪಡಿಸಿದ್ದಾರೆ. ಇನ್ನೂ ಕರೆಯುತ್ತಲಿದ್ದಾರೆ. ಆತ ಮತ್ತು ಇತರ ಕೆಲವರ ಬಾಯಿ ಬಿಡಿಸಿದ ಅಧಿಕಾರಿಗಳು, ಪೊಲೀಸ್ ಎಫ್​ಐಆರ್​ನಲ್ಲಿ ದಾಖಲಾದವರು ನಿಜವಾದ ಹಂತಕರಲ್ಲ. ಬೆಂಗಳೂರು ಮತ್ತು ಮೈಸೂರಿನ ಸುಪಾರಿ ಹಂತಕರು ಯೋಗೀಶಗೌಡನನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು ಎನ್ನುವುದನ್ನು ಪತ್ತೆ ಹಚ್ಚಿದ್ದರು. ಬೆಂಗಳೂರಿನಿಂದ ತಮಿಳುನಾಡಿಗೆ ಪರಾರಿಯಾಗುತ್ತಿದ್ದ ನಿಜವಾದ ಹಂತಕರನ್ನು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ. ಸದ್ಯ ಅವರು ಜೈಲಿನಲ್ಲಿದ್ದಾರೆ.

ಸಿಬಿಐಗೆ ಪ್ರಕರಣ ಹಸ್ತಾಂತರವಾಗುತ್ತಿದ್ದಂತೆ ಜಾಗೃತರಾದ ವಿನಯ ಕುಲಕರ್ಣಿ, ತನಿಖೆಯ ದಿಕ್ಕು ತಪ್ಪಿಸಿ ಸಾಕ್ಷ್ಯ ನಾಶ ಮೂಲಕ ಬಚಾವಾಗಲು ಮೊದಲ ಆರೋಪಿ ಬಸವರಾಜ ಮುತ್ತಗಿ ಹತ್ಯೆಗೇ ತಂತ್ರ ಹೆಣೆದಿದ್ದರು. ಮುತ್ತಗಿ ಹತ್ಯೆಯನ್ನು ಯೋಗೀಶಗೌಡ ಸಹೋದರ ಗುರುನಾಥಗೌಡ ತಲೆಗೆ ಕಟ್ಟಬಹುದೆಂಬ ಧೂರ್ತ ಉಪಾಯವನ್ನೂ ಮಾಡಿದ್ದರು ಎನ್ನುವುದನ್ನು ಸಿಬಿಐ ಅಧಿಕಾರಿಗಳು ಈಗ ಪತ್ತೆ ಮಾಡಿರುವುದಾಗಿ ಗೊತ್ತಾಗಿದೆ. ವಿನಯ ಕುಲಕರ್ಣಿ, ಅವರ ಸೋದರ ಮಾವ ಚಂದ್ರಶೇಖರ ಇಂಡಿ ಹಾಗೂ ಮಧ್ಯವರ್ತಿಯೊಬ್ಬನ ಫೋನ್ ಕರೆ ಮಾಹಿತಿ ಕಲೆಹಾಕಿದ ಅಧಿಕಾರಿಗಳು, ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಈ ಕರೆಗಳ ವಿವರವನ್ನು ಚಂದ್ರಶೇಖರ ಇಂಡಿ ಎದುರು ಇಟ್ಟು ಪ್ರಶ್ನೆ ಕೇಳುತ್ತ ಹೋದಾಗ, ಮುತ್ತಗಿ ಹತ್ಯೆಯ ಪ್ಲ್ಯಾನ್​ ಮಾಹಿತಿ ಹೊರಗೆ ಬಂದಿತು ಎನ್ನಲಾಗಿದೆ.

ಮುತ್ತಗಿ ಹತ್ಯೆಗಾಗಿ ಧಾರವಾಡ ಮೂಲದ ಮಾಜಿ ಚಿತ್ರನಟಿಯನ್ನು ಮದುವೆಯಾಗಿರುವ ಬೆಂಗಳೂರಿನ ರೌಡಿಶೀಟರ್ ಒಬ್ಬನನ್ನು ಸಂರ್ಪಸಲಾಗಿತ್ತು. ಯೋಗೀಶಗೌಡ ಹತ್ಯೆಗಾಗಿ ಶಸ್ತ್ರಾಸ್ತ್ರ ಪೂರೈಸಿದ್ದೆ ಮತ್ತು ಮುತ್ತಗಿ ಹತ್ಯೆಗೆ ತಂತ್ರ ಹೆಣೆದಿದ್ದೆವು ಎಂಬ ಬಗ್ಗೆ ಚಂದ್ರಶೇಖರ ಇಂಡಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಅಕ್ರಮ ಶಸ್ತ್ರಾಸ್ತ್ರವನ್ನು ಭೀಮಾ ತೀರದಿಂದ ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದೆ. ಚಂದ್ರಶೇಖರ ಇಂಡಿಯನ್ನು ಶನಿವಾರ ಸಂಜೆ ವಿಜಯಪುರದಲ್ಲಿ ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು, ಭಾನುವಾರ ಧಾರವಾಡಕ್ಕೆ ಕರೆತಂದಿದ್ದಾರೆ. ಆತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಧೀಶರ ಗೃಹ ಕಚೇರಿಗೆ ಹಾಜರುಪಡಿಸಿದರು.

 ಹತ್ಯೆ ಸುದ್ದಿ ಸುಳ್ಳಾಗಿರಲೆಂದು ನಿರೀಕ್ಷಿಸುತ್ತೇನೆ...

‘ಹತ್ಯೆ ಸುದ್ದಿ ದೇವರ ದಯೆಯಿಂದ ಸುಳ್ಳಿರಲಿ ಅಂತ ನಿರೀಕ್ಷೆ ಇಟ್ಟುಕೊಳ್ಳುತ್ತೇನೆ’ ಎಂದು ಬಸವರಾಜ ಮುತ್ತಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಕೆಲವೊಂದು ವಿಷಯ ಹೊರಗೆ ಹೇಳಲು ಆಗುವುದಿಲ್ಲ. ಬಹಳ ಭಾವನೆಗಳಲ್ಲಿ ಬದುಕಿದ್ದೇನೆ. ಆ ಭಾವನೆಗಳಿಗೆ ನಂಬಿಕೆ ದ್ರೋಹ ಮಾಡುವುದು ಬೇಡ ಎಂದು ಒಗಟಾಗಿ ಹೇಳಿದ ಅವರು, ಇದಿನ್ನೂ ತನಿಖೆ ಹಂತದಲ್ಲಿದೆ. ಸಿಬಿಐದವರು ಮತ್ತೆ ಬರಲು ಹೇಳಿದ್ದಾರೆ ಎಂದರು.

ನೋ ರಿಯಾಕ್ಷನ್...

ಮಾಜಿ ಸಿಎಂ ಸಿದ್ದರಾಮಯ್ಯ ಭಾನುವಾರ ಸಂಜೆ ಧಾರವಾಡ ಬಾರಾಕೊಟ್ರಿಯಲ್ಲಿರುವ ವಿನಯ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದರು. ಕುಲಕರ್ಣಿ ಕುಟುಂಬದವರೊಂದಿಗೆ ಕೆಲಕ್ಷಣ ಮಾತನಾಡಿ ಹೊರಗೆ ಬಂದ ಸಿದ್ದರಾಮಯ್ಯ, ಮಾಧ್ಯಮದವರ ಜತೆ ಮಾತನಾಡಲು ನಿರಾಕರಿಸಿದರು. ಏನೂ ಮಾತನಾಡೊಲ್ಲಾರೀ... ನೋ ರಿಯಾಕ್ಷನ್... ಎಂದಷ್ಟೇ ಹೇಳಿ ತೆರಳಿದರು.

ಇಂದು ತೀರ್ಪು

ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ 39 ದಿನಗಳಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿ ಧಾರವಾಡದ ನ್ಯಾಯಾಲಯದಲ್ಲಿ ಈಗಾಗಲೆ ವಿಚಾರಣೆಯಾಗಿದ್ದು, ಡಿ.14ಕ್ಕೆ ತೀರ್ಪು ಕಾಯ್ದಿರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net