'ಅಕಟಕಟ'ಕ್ಕೆ ಬೈಕ್​ ರೇಸರ್​ ಶೋಗನ್ ಗ್ರೀನ್​ ಸಿಗ್ನಲ್​

Ullasa-2
Published on

ಬೆಂಗಳೂರು: ‘ಲೂಸ್ ಮಾದ’ ಯೋಗಿ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಅಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬದಂದು ಯೋಗಿ ಅಭಿನಯದ ಎರಡು ಹೊಸ ಚಿತ್ರಗಳು ಘೋಷಣೆಯಾಗಿರುವುದು ವಿಶೇಷ. ಈ ಪೈಕಿ ಮೊದಲನೆಯದು ‘ಅಕಟಕಟ’. ಈ ಹಿಂದೆ ‘ದಿ ಬೆಸ್ಟ್ ಆಕ್ಟರ್’ ಎನ್ನುವ ಕಿರುಚಿತ್ರ ಮಾಡಿದ್ದ ನಾಗರಾಜ್ ಸೋಮಯಾಜಿ ಬರೆದ ಹೊಸ ಕಥೆಯೇ ‘ಅಕಟಕಟ’. 10 ನಿಮಿಷ ಕಥೆ ಕೇಳಿದ ಯೋಗಿ, 11ನೇ ನಿಮಿಷದಲ್ಲೇ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರಂತೆ. ‘ಸೌಂಡ್ ಆಫ್ ಅಬ್ನಾರ್ಮಲ್ ಸೌಲ್ ಆಂಡ್ ಮೈಂಡ್’ ಎನ್ನುವ ಉಪಶೀರ್ಷಿಕೆ ಇರುವ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಮಿದುಳಿಗೆ ಜೋಕಾಲಿ ಕಟ್ಟಿಕೊಂಡು ಜೀಕುತ್ತಿರುವ ಹುಡುಗನ ಚಿತ್ರವಿರುವ ಈ ಪೋಸ್ಟರ್, ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯಕ್ಕೆ ಚಿತ್ರತಂಡ ಇಷ್ಟೇ ವಿಷಯಗಳನ್ನು ಬಿಟ್ಟುಕೊಟ್ಟಿದ್ದು, ಕರೊನಾ ಹಾವಳಿ ಕಡಿಮೆಯಾಗುತ್ತಿದಂತೆ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದಲ್ಲದೆ, ಯೋಗಿ ಹುಟ್ಟುಹಬ್ಬದ ಪ್ರಯುಕ್ತ ‘ಶೋಗನ್’ ಎಂಬ ಇನ್ನೊಂದು ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಯೋಗಿ ಮೊದಲ ಬಾರಿಗೆ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ವನ್ನು ನೀನಾಸಂ ಮಂಜು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಗಳಿಗೆ ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net