ಮುಂದೊಂದು ದಿನ ಖರ್ಗೆಯವರು ಕೂಡ ಗಂಗಾ ಸ್ನಾನ ಮಾಡಲೇಬೇಕಾಗುತ್ತದೆ; AICC ಅಧ್ಯಕ್ಷರ ಹೇಳಿಕೆಗೆ Yogi Adityanath ಖಡಕ್​ ತಿರುಗೇಟು

Yogi Kharge
Published on

ಲಖನೌ: ಪ್ರಸ್ತುತ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಬಿಜೆಪಿ ನಾಯಕರು ಪುಣ್ಯಸ್ನಾನ ಮಾಡುತ್ತಿರುವುದನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎನ್​ಡಿಎಗ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು,ಖರ್ಗೆ ಅವರ ಹೇಳಿಕೆಗೆ ತಕ್ಕ ತಿರುಗೇಟು ನೀಡುತ್ತಿದ್ದಾರೆ. ಇದೀಗ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ (Yogi Adityanath) ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಮುಂದೊಂದು ದಿನ ಖರ್ಗೆಯವರು ಕೂಡ ಗಂಗಾ ಸ್ನಾನ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಯೋಗಿ ಆದಿತ್ಯನಾಥ್ (Yogi Adityanath)​, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತುಂಬಾ ವಯಸ್ಸಾಗಿದ್ದು, ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಕೂಡ ಗಂಗಾಸ್ನಾನ ಮಾಡಲೇಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಸತ್ಯಕ್ಕೆ ಹತ್ತಿರವಾಗುತ್ತಾನೆ. ಆದ್ರೆ ಖರ್ಗೆ ಅವರು ರಾಜಕೀಯ ಸ್ವಾರ್ಥಕ್ಕಾಗಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಅಂತಹವರೊಂದಿಗೆ ಪ್ರಯಾಗ್‌ರಾಜ್‌ನ ಸತ್ಯಗಳನ್ನು ಚರ್ಚಿಸಿದ್ರೆ ಅದು ನಾನು ನನಗೆ ಅನ್ಯಾಯ ಮಾಡಿಕೊಂಡಂತೆ ಆಗುತ್ತದೆ ಎಂದು ಹೇಳಿದ್ದಾರೆ. 

Yogi Adityanath

ಹೋರಾಟ ಸಂದರ್ಭದಲ್ಲಿ ರಝಾಕರು ತಮ್ಮ ಕುಟುಂಬವನ್ನು ಹೇಗೆ ನಡೆಸಿಕೊಂಡರು ಎಂಬ ಸತ್ಯವನ್ನು ಖರ್ಗೆ ಬಹಿರಂಗಪಡಿಸಬೇಕು. ಸತ್ಯ ಒಪ್ಪಿಕೊಳ್ಳುವ ದಿನ ಹತ್ತಿರವಾಗುತ್ತಿದೆ. ಈ ಹಿಂದೆ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ "ಭಾರತ್ ಕಿ ಆಸ್ತಾ" ಅನ್ನು ನಿರ್ಲಕ್ಷಿಸಿದವರು ಈಗ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿರುವುದನ್ನು ನೋಡಿದರೆ ನನಗೆ ಖುಷಿಯಾಗುತ್ತದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

ಕುಟುಂಬದ ತ್ಯಾಗವನ್ನೇ ಮರೆತ್ತಿದ್ದಾರೆ

2024ರ ನವೆಂಬರ್ ತಿಂಗಳಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರ ಸಂದರ್ಭದಲ್ಲೂ  ಮಲ್ಲಿಕಾರ್ಜುನ​ ಖರ್ಗೆ ಅವರು ನನ್ನ ಮೇಲೆ ಕೋಪಗೊಳ್ಳುತ್ತಿದ್ದಾರೆ. ಖರ್ಗೆ ಜೀ, ನಾನು ನಿಮ್ಮ ವಯಸ್ಸಿಗೆ ಗೌರವ ನೀಡುತ್ತೇನೆ. ನನ್ನ ಮೇಲೆ ಕೋಪಗೊಳ್ಳಬೇಡಿ, ಒಂದು ವೇಳೆ ಕೋಪಗೊಳ್ಳುವುದಿದ್ದರೆ ರಜಾಕರ ಮೇಲೆ ಸಿಟ್ಟಾಗಿ. ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟು ಹಾಕಿದರು, ಹಿಂದುಗಳನ್ನು ಕ್ರೂರವಾಗಿ ಕೊಂದರು. ನಿಮ್ಮ ತಂದೆ, ತಾಯಿ, ಸಹೋದರಿ ಮತ್ತು ಕುಟುಂಬದ ಸದಸ್ಯರನ್ನು ಸುಟ್ಟರು. ಆದರೆ, ಖರ್ಗೆ ಅವರು ಇದನ್ನು ಹೇಳುವುದಿಲ್ಲ, ಈ ಮಾತುಗಳಾಡಿದರೆ ಮುಸ್ಲಿಂ ವೋಟ್​ಗಳು ನುಣುಚಿಕೊಳ್ಳುತ್ತವೆ. ವೋಟ್​ ಬ್ಯಾಂಕ್​ಗಾಗಿ ಖರ್ಗೆ ಅವರು, ತಮ್ಮ ಕುಟುಂಬದ ತ್ಯಾಗವನ್ನೇ ಮರೆತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್​ ವಾಗ್ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net