ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಪತಂಜಲಿಯ 'ಕರೊನಿಲ್'​: ಬಾಬಾ ರಾಮ್​ದೇವ್​

Baba Ramdev 26 Jan 20
Published on

ನವದೆಹಲಿ: ಕರೊನಾ ಸೋಂಕು ನಿವಾರಣೆಗಾಗಿ ಕರೊನಿಲ್​ ಎಂಬ ಔಷಧಿ ಕಂಡು ಹಿಡಿದಿದ್ದ ಪತಂಜಲಿ ಸಂಸ್ಥೆ ನೂರೆಂಟು ಅಡೆತಡೆಗಳನ್ನು ಎದುರಿಸಿದೆ. ಮಾತ್ರೆಗಳ ಮಾರಾಟಕ್ಕೆ ಆಯುಷ್​ ಇಲಾಖೆ ಅವಕಾಶ ಕೊಡಲಿಲ್ಲ. ಕೆಲವು ರಾಜ್ಯಸರ್ಕಾರಗಳೂ ಅದನ್ನು ವಿರೋಧಿಸಿದವು. ಅಷ್ಟೇ ಅಲ್ಲ ಸಂಸ್ಥೆ ಮುಖ್ಯಸ್ಥ ಬಾಬಾ ರಾಮ್​​​ದೇವ್​, ಸಿಸಿಒ ಆಚಾರ್ಯ ಬಾಲಕೃಷ್ಣ ವಿರುದ್ಧ ಎಫ್ಐಆರ್​ ಕೂಡ ದಾಖಲಾಗಿದೆ.

ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಮೌನವಾಗಿಯೇ ಇದ್ದ ಯೋಗಗುರು ಬಾಬಾ ರಾಮ್​ ದೇವ್​ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಇಲ್ಲಿ ಅನೇಕರು ಆಯುರ್ವೇದ ವಿರೋಧಿಗಳಿದ್ದಾರೆ. ಹಾಗಾಗಿಯೇ ಕರೊನಾಕ್ಕೆ ಆಯುರ್ವೇದ ಔಷಧಿ ಕಂಡುಹಿಡಿದಿದ್ದೇವೆ ಎಂದರೆ ಒಪ್ಪುತ್ತಿಲ್ಲ. ನನ್ನನ್ನು ಜೈಲಿಗೆ ಕಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಈಗಾಗಲೇ ಎಫ್​ಐಆರ್​ ಕೂಡ ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಂದುವರಿದ ಕರೊನಿಲ್​ ವಿವಾದ; ಯೋಗಗುರು ಬಾಬಾ ರಾಮ್​ದೇವ್​ ಸೇರಿ ಐವರ ವಿರುದ್ಧ ಎಫ್​ಐಆರ್​​​

ಕೆಲವರಿಗೆ ನನ್ನ ಬಗ್ಗೆ ತೀವ್ರ ಅಸಮಾಧಾನ ಇರಬಹುದು. ಆದರೆ ನನ್ನ ಮೇಲಿನ ದ್ವೇಷವನ್ನು ಕರೊನಾ ಸೋಂಕಿತರಿಗೆ ಅನ್ವಯ ಮಾಡಿಕೊಳ್ಳಬಾರದು. ಅವರ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕು. ಕರೊನಾ ನಿವಾರಣೆಗಾಗಿ ನಾವು ಔಷಧಿ ಕಂಡುಹಿಡಿದಿದ್ದೇವೆ ಎಂಬ ಮಾತ್ರಕ್ಕೆ ಅದನ್ನು ಇಷ್ಟರ ಮಟ್ಟಿಗೆ ವಿರೋಧಿಸಬಾರದು ಎಂದಿದ್ದಾರೆ.

ಕರೊನಾ ಮ್ಯಾನೇಜ್​ಮೆಂಟ್​ ನಿರ್ದೇಶನದಲ್ಲಿ ಔಷಧಿ ಕಂಡು ಹಿಡಿದ ಪತಂಜಲಿ ಸಂಸ್ಥೆಯನ್ನು ಆಯುಷ್​ ಇಲಾಖೆ ಶ್ಲಾಘಿಸಿದೆ. ಪತಂಜಲಿ ಹಾಗೂ ಆಯುಷ್​ ಇಲಾಖೆಯ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕರೊನಿಲ್​​ನ್ನು ಕ್ಲಿನಿಕಲ್​ ಟ್ರಯಲ್​​ಗೆ ಒಳಪಡಿಸಿದ್ದೇವೆ. ಒಟ್ಟು ಪ್ರಯೋಗಕ್ಕೆ ಒಳಗಾದ ಕರೊನಾ ರೋಗಿಗಳಲ್ಲಿ ಶೇ.69 ಮಂದಿ ಮೂರೇ ದಿನಗಳಲ್ಲಿ ಗುಣಮುಖರಾಗಿದ್ದಾರೆ. ಹಾಗೇ ಶೇ.100 ರೋಗಿಗಳು ಏಳು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಕ್ಲಿನಿಕಲ್​ ಟ್ರಯಲ್​​ನ ದಾಖಲೆಗಳನ್ನು ನಾವು ಆಯುಷ್​ ಇಲಾಖೆಗೆ ನೀಡಿದ್ದೇವೆ ಎಂದು ಬಾಬಾ ರಾಮ್​ ದೇವ್​ ಹೇಳಿದರು.

ಮನುಷ್ಯನ ದೇಹದೊಳಗೆ ಕರೊನಾ ಉಂಟು ಮಾಡುವ ಹಾನಿಯನ್ನು ಕರೊನಿಲ್​ ನಿಯಂತ್ರಿಸುತ್ತದೆ ಎಂಬುದು ನಮ್ಮ ಪ್ರಯೋಗದಿಂದ ಗೊತ್ತಾಗಿದೆ ಎಂದು ತಿಳಿಸಿದರು. ನಾವು ಅನೇಕ ರೋಗಗಳಿಗೆ ಆಯುರ್ವೇದದಿಂದಲೇ ಔಷಧಿ ಕಂಡುಹಿಡಿಯಲು ಕೆಲಸ ಮಾಡುತ್ತಿದ್ದೇವೆ. ನಮ್ಮೊಂದಿಗೆ ಸುಮಾರು 500 ವಿಜ್ಞಾನಿಗಳ ತಂಡವಿದೆ. ಹೆಪಟೈಟಿಸ್​, ಅಸ್ತಮಾಕ್ಕೂ ನಮ್ಮ ಬಳಿ ಔಷಧಿಯಿದೆ ಎಂದರು.

ಕರೊನಿಲ್​ನ್ನು ಕೂಡ ನೈಸರ್ಗಿಕವಾಗಿ, ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಈ ಕರೊನಿಲ್​ ಇಂದಿನಿಂದಲೇ  ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ನಮಗೆ ಆಯುಷ್​ ಇಲಾಖೆಯೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ದೃಢಪಡಿಸಿದರು. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net