

ಬೈಂದೂರು: ಯೋಗದಿಂದ ಮನಸ್ಸು ಮತ್ತು ದೇಹ ಆರೋಗ್ಯದಿಂದ ಕೂಡಿರುತ್ತದೆ. ಯೋಗವನ್ನು ಕೇವಲ ಯೋಗ ದಿನಾಚರಣೆಗೆ ಸೀಮಿತಗೊಳಿಸದೇ ನಿತ್ಯವೂ ಯೋಗಾಭ್ಯಾಸ ಮಾಡುತ್ತಿರಬೇಕು. ಇದರಿಂದ ರೋಗ ದೂರವಾಗಿ ಆರೋಗ್ಯದಿಂದ ಜೀವನ ನಡೆಸಬಹುದು ಎಂದು ಕಾಲ್ತೋಡು ಗ್ರಾಪಂ ವಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಟ್ನಾಡಿ ಅಣ್ಣಪ್ಪ ಶೆಟ್ಟಿ ಹೇಳಿದರು.
ಕಾಲ್ತೊಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಕಾಲ್ತೋಡು ಗ್ರಾಪಂ, ಆಯುಷ್ಮಾನ್ ಆರೋಗ್ಯ ಮಂದಿರದ ಸಂಯುಕ್ತಾಶ್ರಯದಲ್ಲಿ ಶನಿವಾರ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷ ಚಿಕ್ಕಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಹಾಗೂ ಯೋಗಗುರು ಸುಬ್ಬಯ್ಯ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಗೌರಿ, ಸದಸ್ಯರಾದ ಕಿರಣ್ ಶೆಟ್ಟಿ, ನೇತ್ರಾವತಿ ಆಚಾರ್ಯ, ಕಾರ್ಯದರ್ಶಿ ಆನಂದ ಬಿಲ್ಲವ ಉಪಸ್ಥಿತರಿದ್ದರು.
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಸ್ವಾಗತಿಸಿದರು. ಯೋಗಗುರು ಸುಬ್ಬಯ್ಯ ದೇವಾಡಿಗ, ಯೋಗ ತರಬೇತುದಾರ ಸರಸ್ವತಿ ಕುಲಾಲ್ ಹಾಗೂ ಶೇಖರ ಶೆಟ್ಟಿ ವಾರ್ಗದರ್ಶನದಲ್ಲಿ ಸಾರ್ವಜನಿಕರು ಯೋಗದ ವಿವಿಧ ಆಸನಗಳನ್ನು ಮಾಡಿದರು. ಆಸ್ಪತ್ರೆ ಸಿಬ್ಬಂದಿ ನಾಗದೀಪ ಆಚಾರ್ಯ ಹಾಗೂ ವಿಶಾಲ ಸಹಕರಿಸಿದರು.