

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕ್ಷಯರೋಗ ವಿರುದ್ಧದ ಹೋರಾಟದಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿರುವ ಯೋಗ ಮಾರ್ಗಸೂಚಿ ಕ್ಷಯ ರೋಗಿಗಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯಕವಾಗಲಿ ಎಂದು ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಹೇಳಿದರು.
ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಕ್ಷಯರೋಗ ಕಚೇರಿ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾರದಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿರುವ ತಲಪಾಡಿಯ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಕ್ಷಯರೋಗಕ್ಕೆ ಯೋಗ ಮಾಡ್ಯೂಲ್ ಹಾಗೂ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಖದೀಜಾ ಮಾತನಾಡಿ, ಕ್ಷಯರೋಗ ನಿಯಂತ್ರಣದಲ್ಲಿ ಯೋಗದಂತಹ ಪೂರಕ ಚಿಕಿತ್ಸೆಗಳು ಬಹಳ ಮುಖ್ಯ. ಈ ಯೋಗ ಮಾರ್ಗಸೂಚಿ ಕ್ಷಯರೋಗಿಗಳಿಗೆ ಚಿಕಿತ್ಸೆಯ ಪರಿಣಾಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.
‘ಆರೋಗ್ಯಕರ ಶ್ವಾಸಕೋಶ, ಆರೋಗ್ಯಕರ ಜೀವನ’ ಮತ್ತು ‘ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು’ ಎಂಬ ಧ್ಯೇಯ ವಾಕ್ಯಗಳೊಂದಿಗೆ ಕಾರ್ಯಕ್ರಮವನ್ನು ಕಾಲೇಜಿನ ಸಾಮಾಜಿಕ ಮಾಧ್ಯಮದ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಮತ್ತು ಕ್ಷಯರೋಗ ಕಚೇರಿಗಳ ಸಾಮಾಜಿಕ ಮಾಧ್ಯಮಗಳ ಮೂಲಕವೂ ಭಿತ್ತಿಪತ್ರಗಳ ಪ್ರದರ್ಶನ ಲಿಂಕ್ ಮಾಡಲಾಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು. ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ನಂದೀಶ್ ಎನ್.ಎಸ್. ಸ್ವಾಗತಿಸಿದರು. ಡಾ.ಸಾಯಿ ಸುಪ್ರಿಯಾ ಕ್ಷಯರೋಗಕ್ಕೆ ಸಂಬಂಧಿಸಿದ ಯೋಗ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದರು. ಶಕ್ತಿ ಮತ್ತು ಡಾನಿಕಾ ನಿರೂಪಿಸಿದರು. ಉಪಪ್ರಾಂಶುಪಾಲೆ ಡಾ.ಲತಾಮಣಿ ಕೆ. ವಂದಿಸಿದರು.
ಆಯುಷ್ ಇಲಾಖೆ ಯೋಗ ಮತ್ತು ಇತರ ಸಾಂಪ್ರದಾಯಿಕ ಚಿಕಿತ್ಸೆಗಳ ಮೂಲಕ ಕ್ಷಯರೋಗ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಯೋಗ ಮಾರ್ಗಸೂಚಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಡಾ.ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ಅಧಿಕಾರಿ https://www.vijayavani.net/leopard-movement-in-manjeshwara https://www.vijayavani.net/kavattaru-temple-program