

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಸಾಮೂಹಿಕ ಪ್ರದರ್ಶನ, ಮಹತ್ವದ ಗುಣಗಾನ, ಜಾಗೃತಿ ಚಟುವಟಿಕೆಯೊಂದಿಗೆ ಜಿಲ್ಲಾದ್ಯಂತ ಶುಕ್ರವಾರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ಯೋಗ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ಚಾಲನೆ ನೀಡಿ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತೀಯ ಯೋಗದ ಮಹತ್ವ ಸಾರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸುತ್ತಿರುವುದು ಗರ್ವದ ವಿಷಯವಾಗಿದೆ. ದೇಹವನ್ನು ದಂಡಿಸಲು ಯೋಗ ಪದ್ಧತಿ ಉತ್ತಮ ವಿಧಾನವಾಗಿದೆ. ವರನಟ ಡಾ. ರಾಜ್ ಕುಮಾರ್ ಯೋಗಾಭ್ಯಾಸವನ್ನು ರೂಢಿಸಿಕೊಂಡು ದೇಹವನ್ನು ಆರೋಗ್ಯವಾಗಿಟ್ಟುಕೊಂಡಿದ್ದರು ಎಂದರು.
ಸಂಸದ ಡಾ. ಕೆ. ಸುಧಾಕರ್ ಮಾತನಾಡಿ, ಭಾರತದ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ಯೋಗ ಪದ್ಧತಿಯನ್ನು ಜಗತ್ತಿನ 150ಕ್ಕೂ ಹೆಚ್ಚು ದೇಶಗಳು ಅಳವಡಿಸಿಕೊಂಡಿದ್ದು, ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಈ ವರ್ಷದ ಯೋಗ ದಿನದ ಘೋಷವಾಕ್ಯವು ಹೆಚ್ಚು ಅರ್ಥಪೂರ್ಣವಾಗಿದೆ. ನೆಮ್ಮದಿ, ಆರೋಗ್ಯಕರ ಬದುಕಿಗೆ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಸಹಕಾರಿಯಾಗಲಿದೆ ಎಂದರು.
ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗ ಸಹಕಾರಿ
ಸಂಸದ ಡಾ. ಕೆ. ಸುಧಾಕರ್ ಮಾತನಾಡಿ, ಜಗತ್ತಿನ 150ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಈ ವರ್ಷದ ಯೋಗ ದಿನದ ಘೋಷವಾಕ್ಯವು ಅರ್ಥಪೂರ್ಣವಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗಾಭ್ಯಾಸ ಬಹುಮುಖ್ಯ. ಧ್ಯಾನವು ಯೋಗದ ಮಹತ್ವದ ಭಾಗವಾಗಿದೆ. ಚಲನೆಯಿಂದ ನಿಶ್ಚಲತೆಗೆ, ಶಬ್ದದಿಂದ ನಿಶ್ಯಬ್ದಕ್ಕೆ ಜಾರುವುದು ಧ್ಯಾನವಾಗಿದೆ. ಧ್ಯಾನವು ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ಒಳಗೊಂಡಿರುತ್ತದೆ. ಯೋಗದಿಂದ ಕೇವಲ ದೈಹಿಕವಲ್ಲದೆ ಆಧ್ಯಾತ್ಮಿಕವಾಗಿಯೂ ಪ್ರಯೋಜನ ಇದೆ ಎಂದರು.
ಯೋಗ ಪ್ರದರ್ಶಿಸಿದ ಪ್ರಮುಖರು
ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್, ಸಂಸದ ಡಾ. ಕೆ. ಸುಧಾಕರ್ ಅವರಲ್ಲದೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಎಲ್ ನಾಗೇಶ್, ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಐ. ಖಾಸೀಂ, ಜಿಪಂ ಉಪಕಾರ್ಯದರ್ಶಿ ಡಾ. ಭಾಸ್ಕರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ತಬಿಬಾಬಾನು, ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಎಸ್. ಮಹೇಶ್‌ಕುಮಾರ್ ಮತ್ತಿತರರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಶಿಕ್ಷಕರ ಮಾರ್ಗದರ್ಶನ
ಯೋಗ ಶಿಕ್ಷಕರಾದ ಲೋಕನಾಥ್, ಸುಧಾ ನಾಗರಾಜ್ ಮಾರ್ಗದರ್ಶನದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು 45 ನಿಮಿಷ ವಿವಿಧ ಯೋಗಾಸನಗಳನ್ನು ಮಾಡಿದರು. ಯೋಗ ಶಿಕ್ಷಕರಾದ ಪೊಲೀಸ್ ನಾಗರಾಜ್, ವೀಣಾ ಲೋಕನಾಥ್, ಮಂಚನಬಲೆ ರವಿ, ಗೋವಿಂದ ನಿರ್ದೇಶನಕ್ಕೆ ಅನುಗುಣವಾಗಿ ವೇದಿಕೆ ಮೇಲೆ ಯೋಗಾಸನಗಳ ಮಾದರಿಯನ್ನು ತೋರಿಸಿದರು. ಇದನ್ನು ಇತರರು ಅನುಕರಿಸಿದರು.
ಶಾಸಕ ಪ್ರದೀಪ್ ಈಶ್ವರ್ ಗೈರು
ಮೊದಲಿನಿಂದಲೂ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಿಂದ ಅಂತರ ಕಾಪಾಡಿಕೊಳ್ಳುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಯೋಗ ದಿನಾಚರಣೆಗೂ ಗೈರಾಗಿದ್ದರು. ಆಹ್ವಾನ ಪತ್ರಿಕೆಗಳಲ್ಲಿ ಮಾತ್ರ ಕ್ಷೇತ್ರದ ಶಾಸಕರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವುದರ ಬಗ್ಗೆ ಮುದ್ರಿಸಲಾಗುತ್ತಿದೆ. ಆದರೆ, ಶಾಸಕರು ಕಾರ್ಯಕ್ರಮಗಳಿಗೆ ಬರುತ್ತಿಲ್ಲ. ಬಹುತೇಕ ಸರ್ಕಾರಿ ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಗೈರಾಗಿದ್ದರು.
ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಇಲ್ಲಿನ ಆಧ್ಯಾತ್ಮಿಕ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸ್ವಯಂಸೇವಕರು ಮತ್ತು ಮಕ್ಕಳೊಂದಿಗೆ ಯೋಧರು ಯೋಗ ಪ್ರದರ್ಶಿಸಿ ಗಮನ ಸೆಳೆದರು.
ಚಿಕ್ಕಬಳ್ಳಾಪುರ ವ್ಯಾಪ್ತಿಯ 20 ಕಾಲೇಜುಗಳ 5ನೇ ಕರ್ನಾಟಕ ಬೆಟಾಲಿಯನ್‌ನ 1 ಸಾವಿರ ಎನ್‌ಸಿಸಿ ಕೆಡೆಟ್‌ಗಳು, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಕೋರ್‌ನ 200 ಸೈನಿಕರು, ಗಡಿಭದ್ರತಾ ಪಡೆಯ ಉಪ ತರಬೇತಿ ಕೇಂದ್ರದ 120 ಸೈನಿಕರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಸರಿ ತಪ್ಪುಗಳ ಬಗ್ಗೆ ಅರಿವು ಇರುತ್ತದೆ. ಇದೇ ವೇಳೆ ಪ್ರಜ್ಞಾಪೂರ್ವಕವಾಗಿ ಅನಪೇಕ್ಷಿತ ಕೆಲಸಗಳಿಂದ ದೂರವಿರಬೇಕು. ಒಳ್ಳೆಯ ಚಟುವಟಿಕೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪರಿಸರ ಮಾಲಿನ್ಯ ಹೆಚ್ಚಳದಿಂದ ಜನರು ಆರೋಗ್ಯ ವೃದ್ಧಿಗಾಗಿ ವಿವಿಧ ಒತ್ತಡಗಳಿಗೆ ಗುರಿಯಾಗುವುದು ಹೆಚ್ಚಾಗಿದೆ. ಉಸಿರಾಡುವ ಗಾಳಿ, ಫಲವತ್ತತೆಯ ಮಣ್ಣು, ಕುಡಿಯುವ ನೀರು ಗುಣಮಟ್ಟವನ್ನು ಕಳೆದುಕೊಂಡಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಂತರಿಕವಾಗಿ ಆನಂದದಿಂದ ಇರಲು ಯೋಗದ ನಿಯಮಿತ ಅಭ್ಯಾಸ ಅಗತ್ಯ ಎಂದರು.
ಏರ್ ಕಮೋಡೋರ್ ಎಸ್.ಬಿ.ಅರುಣ್ ಕುಮಾರ್ ಮಾತನಾಡಿ, ದೇಶದ ಎಲ್ಲರೂ ಯೋಗವನ್ನು ರೂಢಿಸಿಕೊಳ್ಳಬೇಕು. ಇದು ಕೇವಲ ಶಾರೀರಿಕ ವ್ಯಾಯಾಮವಲ್ಲ, ಬದಲಿಗೆ ದೇಹ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸುವ ಒಂದು ಪರಿಪೂರ್ಣ ಅಭ್ಯಾಸ ಎಂದರು. ಜಗತ್ತಿನೆಲ್ಲೆಡೆ ಒಬ್ಬರಿಗೊಬ್ಬರು ಬೆಸೆದುಕೊಂಡಿದ್ದು ಯೋಗದ ಮೂಲಕ ತಮ್ಮ ನಡುವಿನ ತಡೆಗೋಡೆಗಳನ್ನು ಮುರಿದು, ವಿಶ್ವವನ್ನೇ ಒಂದು ಕುಟುಂಬವನ್ನಾಗಿಸಿಕೊಳ್ಳಬಹುದು ಎಂದರು.
ಪ್ರತಿದಿನ ಯೋಗಾಭ್ಯಾಸ
ಸದ್ಗುರು ಸನ್ನಿಧಿಯಲ್ಲಿರುವ ಸಮುದಾಯ ಯೋಗ ಭವನವನ್ನು ಉದ್ಘಾಟಿಸಲಾಯಿತು. ಇಲ್ಲಿ ಪ್ರತಿದಿನ ಉಚಿತ ಯೋಗಾಭ್ಯಾಸ ಪ್ರಕ್ರಿಯೆ ನಡೆಯಲಿದ್ದು, ಈಶದ ಯೋಗ ಶಿಕ್ಷಕರು ಬೆಳಗ್ಗೆ 10.30ರಿಂದ ಸಂಜೆ 6ರವರೆಗೆ 30 ನಿಮಿಷಗಳ ಅವಧಿಯ ಯೋಗ ತರಗತಿ ನಡೆಸುತ್ತಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಯಲಿದೆ ಎಂದು ಈಶ ಫೌಂಡೇಷನ್ ತಿಳಿಸಿದೆ.