ಇಡಿ ಅಧಿಕಾರಿಗಳಿಂದ ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದಲ್ಲಿ ಶೋಧ ಕಾರ್ಯ: ಲುಕ್ ಔಟ್ ನೋಟಿಸ್​ ಜಾರಿ​

Rana Kapoor
Published on

ಮುಂಬೈ: ಯೆಸ್​ ಬ್ಯಾಂಕ್​ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಂಸ್ಥಾಪಕ ರಾಣಾ ಕಪೂರ್ ಅವರ ಮುಂಬೈ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ಮಾಡಿ, ಶೋಧ ಕಾರ್ಯ ನಡೆಸಿತು. ಕಪೂರ್​ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಪೂರ್​ ವಿರುದ್ಧ ಈಗಾಗಲೇ ಲುಕ್ ಔಟ್ ನೋಟಿಸ್​ ಕೂಡ ಜಾರಿ ಮಾಡಲಾಗಿದೆ. ಅಲ್ಲದೆ, ಯೆಸ್​ ಬ್ಯಾಂಕ್​ನ ಮಾಜಿ ನಿರ್ದೇಶಕರು ದೇಶ ತೊರೆಯದಂತೆ ಮುಂಜಾಗ್ರತ ಕ್ರಮವನ್ನು ವಹಿಸಲಾಗಿದೆ.

ಬ್ಯಾಂಕ್​ ನಿರ್ವಹಣೆಯ ಪುನರ್ರಚನೆಗೆ ಕಾರಣವಾದ ಬ್ಯಾಂಕಿನ ಉನ್ನತ ಅಧಿಕಾರಿಗಳಿಂದ ನಡೆದಿರುವ ಕರ್ತವ್ಯ ಲೋಪವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಪಟ್ಟಿ ಮಾಡಿದ ದಿನದಂದೇ ಈ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ.

ಅಂದಹಾಗೆ ಕಪೂರ್​ ಯೆಸ್​ ಬ್ಯಾಂಕ್​ ಆರಂಭವಾದ 2004ರಿಂದಲೂ ಸಿಇಒ ಆಗಿದ್ದರು. ತನ್ನ ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಿದ್ದ ಮನವಿಯನ್ನು ಆರ್​ಬಿಐ ನಿರಾಕರಿಸಿದ ಬಳಿಕ 2018ರ ಸೆಪ್ಟೆಂಬರ್​​ನಲ್ಲಿ ಸಿಇಒ ಸ್ಥಾನದಿಂದ ಕೆಳಗೆ ಇಳಿದಿದ್ದರು.

ಸುಸ್ಥಿ ಸಾಲಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯೆಸ್​ ಬ್ಯಾಂಕ್​ ಅನ್ನು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್​ ಆಡಳಿತ ಮಂಡಳಿಯನ್ನು ಸೂಪರ್​ ಸೀಡ್​ ಆಗಿ ಮಾಡಿದೆ. ನಗದು ವಿತ್​ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದ್ದು, ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಷೇರು ಮಾರುಕಟ್ಟೆಯಲ್ಲೂ ಯೆಸ್​ ಬ್ಯಾಂಕ್​ ಪಾಲು ತೀವ್ರ ಕುಸಿತ ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net