

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳನ್ನು ಬಿಜೆಪಿ ಹೈಕಮಾಂಡ್, ರಾಷ್ಟ್ರೀಯ ನಾಯಕರ ಗಮನಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಪಕ್ಷದ ನೀತಿ ನಿರೂಪಣೆಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಅವರು ಪಕ್ಷದ ಶಾಸಕರು. ನಿಮ್ಮ ಹೈಕಮಾಂಡ್ಗೆ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು. ಪಕ್ಷದ ವೇದಿಕೆಯಲ್ಲೇ ಎಲ್ಲವನ್ನೂ ಚರ್ಚಿಸಬೇಕು. ಯಾರೂ ಬಹಿರಂಗ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರ ಪ್ರಭಾವ ಇಲ್ಲದೆ ಮುಡಾ ಸೈಟುಗಳನ್ನು ಪಡೆಯಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಈಗ ಲೋ ಕಮಾಂಡ್ ಆಗಿದೆ. ಸೋನಿಯಾ, ರಾಹುಲ್, ಪ್ರಿಯಾಂಕ, ರಾಬರ್ಟ್ ವಾದ್ರಾ ಎಲ್ಲರೂ ಬೇಲ್ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಆರ್ಥಿಕ ಅಪರಾಧದಲ್ಲಿ ಇರುವುದರಿಂದಲೇ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ಹೈಕಮಾಂಡ್ ನಾಯಕರೇ ಜಾಮೀನಿನ ಮೇಲೆ ಹೊರಗಿರುವಾಗ ಅವರು ಸಿಎಂ ಸಿದ್ದರಾಮಯ್ಯನವರಿಗೆ ರಾಜೀನಾಮೆ ನೀಡಿ ಎಂದು ಹೇಳಲು ಸಾಧ್ಯವೇ? ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದಲ್ಲಿ ತಮ್ಮ ಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
‘2004ರಿಂದ ಈಚೆಗೆ ನೀವು ಸತತವಾಗಿ ಒಂದಲ್ಲ ಒಂದು ಸ್ಥಾನದಲ್ಲಿ ಇರಲಿಲ್ಲ ಎಂದಾದರೆ, ಇದು ಇನ್ಯಾರಿಗೂ ಸಾಮಾನ್ಯ ಮನುಷ್ಯನಿಗೆ ಮುಟ್ಟಲು ಸಾಧ್ಯವೇ ಇಲ್ಲ. ಮತ್ತು ಇದು ಮುಖ್ಯಮಂತ್ರಿಯ ಪತ್ನಿಗೆ ಮುಖ್ಯಮಂತ್ರಿಗೆ ಗೊತ್ತಾಗದೇ ಆಗಲು ಸಾಧ್ಯ ಇಲ್ಲ. ಈ ರೀತಿ ಕೋರ್ಟ್ ತೀವ್ರವಾಗಿ ಹೇಳಿದೆ’ ಎಂದರು.
ನೀವು ಬಾಬಾಸಾಹೇಬ ಡಾ. ಅಂಬೇಡ್ಕರರಿಗೆ ಅಪಮಾನ ಮಾಡಿದವರು. ಅವರನ್ನು ಎರಡೆರಡು ಬಾರಿ ಸೋಲಿಸಿದವರು. ಸಂವಿಧಾನಕ್ಕೆ ಗೌರವ ಕೊಡದ ನೀವು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸಂವಿಧಾನದ ಪ್ರತಿ ಹಿಡಿದು ಓಡಾಡಿದ್ದೀರಿ ಎಂದು ಟೀಕಿಸಿದರು.