

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯೂ ಸೇರಿದಂತೆ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಉಂಟಾದ ಹಾನಿ ಸರಿಪಡಿಸುವ ಕಾಮಗಾರಿಗಳಿಗೆ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆಯ ಸರಾಸರಿ 166 ಮಿ. ಮೀ. ಬದಲಾಗಿ 837 ಮಿ.ಮೀ. ಮಳೆಯಾಗಿದ್ದು, ಶೇ.409 ಹೆಚ್ಚುವರಿ ಮಳೆಯಾಗಿದೆ. ಜೂನ್ ತಿಂಗಳಲ್ಲೂ ಹೆಚ್ಚಿನ ಮಳೆಯಾಗಿದ್ದು, ದೇಶದಲ್ಲಿಯೇ ಅತ್ಯಧಿಕವಾಗಿ ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ ಎಂದು ತಿಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಕ್ಷೇತ್ರದಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿದ್ದು, ರಕ್ಷಣಾ ಕಾರ್ಯ, ಪುನರ್ವಸತಿ ಕೆಲಸ ನಡೆಯುತ್ತಿದೆ. ಸಮುದ್ರ ತೀರದಲ್ಲಿ ಹಲವೆಡೆ ಕಡಲು ಕೊರೆತದ ಸಮಸ್ಯೆ ಉಂಟಾಗಿದೆ. ಸುಂಟರಗಾಳಿ ಮತ್ತು ವಿಪರೀತ ಮಳೆಯಿಂದಾಗಿ ನೂರಾರು ಮರಗಳು ಬಿದ್ದು ವಿದ್ಯುತ್ ಕಂಬ ಹಾಗು ಈವರೆಗೆ ನೂರಾರು ಮನೆಗಳಿಗೆ ಹಾನಿಯಾಗಿದೆ. ರಸ್ತೆ, ಮೋರಿ, ಅನೇಕ ಶಾಲಾ ಕಟ್ಟಡಗಳು, ಕಾಲುಸಂಕಗಳು ಹಾಗೂ ಸೇತುವೆಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಶಾಸಕ ಯಶ್ಪಾಲ್ ಮಾಹಿತಿ ನೀಡಿದ್ದಾರೆ.
ಎರಡು ವರ್ಷದಿಂದ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಯಾಗದೆ ಗ್ರಾಮೀಣ ರಸ್ತೆಗಳು ಸಮರ್ಪಕ ನಿರ್ವಹಣೆಯಿಲ್ಲದೆ ಸಂಚಾರ ದುಸ್ತರವಾಗಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆಗೆ ಹಾಗೂ ದುರಸ್ತಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಪ್ರಾಕೃತಿಕ ವಿಕೋಪದಡಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಶಾಸಕ ಯಶ್ಪಾಲ್ ಪತ್ರದಲ್ಲಿ ತಿಳಿಸಿದ್ದಾರೆ.