ಜೈಸ್ವಾಲ್-ರಾಹುಲ್ ಜತೆಯಾಟಕ್ಕೆ ಕೊಹ್ಲಿ ಸೆಲ್ಯೂಟ್: 20 ವರ್ಷಗಳ ಬಳಿಕ ಆರಂಭಿಕರ ಶತಕದಾಟ!

New Project (2)
Published on

ಪರ್ತ್: ಮೊದಲ ದಿನ 17 ವಿಕೆಟ್ ಪತನಕ್ಕೆ ಸಾಕ್ಷಿಯಾಗಿದ್ದ ಆಪ್ಟಸ್ ಕ್ರೀಡಾಂಗಣದಲ್ಲಿ 2ನೇ ದಿನ 3 ವಿಕೆಟ್ ಮಾತ್ರ ಉರುಳಿದವು. ಅದೂ ಆತಿಥೇಯ ಆಸ್ಟ್ರೇಲಿಯಾದ ಬ್ಯಾಟರ್‌ಗಳದ್ದು. ಜತೆಗೆ ಪ್ರವಾಸಿ ಭಾರತ ತಂಡದ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಯಾದ ಬೌಲರ್‌ಗಳ ನಿರೀಕ್ಷೆ ಸಂಪೂರ್ಣ ಹುಸಿಯಾಗಿ ಪರದಾಡಿದರು. ಶತಕದ ಸನಿಹದಲ್ಲಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (90* ರನ್, 193 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಉತ್ತಮ ಸಾಥ್ ನೀಡಿರುವ ಕನ್ನಡಿಗ ಕೆಎಲ್ ರಾಹುಲ್ (62* ರನ್, 153 ಎಸೆತ, 4 ಬೌಂಡರಿ) ನಡೆಸಿದ ಅಮೋಘ ಜತೆಯಾಟದ ನೆರವಿನಿಂದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಬೃಹತ್ ಮುನ್ನಡೆಯತ್ತ ಸಾಗಿದೆ. ಮೊದಲ ಇನಿಂಗ್ಸ್‌ನ ಕುಸಿತದ ಬಳಿಕ ಬೌಲಿಂಗ್‌ನಲ್ಲಿ ತಿರುಗೇಟು ನೀಡಲು ಯಶಸ್ವಿಯಾದ ಜಸ್‌ಪ್ರೀತ್ ಬುಮ್ರಾ ಪಡೆ 2ನೇ ಸರದಿಯ ಸುಧಾರಿತ ಬ್ಯಾಟಿಂಗ್ ಮೂಲಕ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.

ಕೊಹ್ಲಿ ಸೆಲ್ಯೂಟ್: ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಜತೆಯಾಟಕ್ಕೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸೆಲ್ಯೂಟ್ ಮೂಲಕ ಅಭಿನಂದಿಸಿದರು. ಎರಡನೇ ದಿನದ ಆಟ ನಿಲ್ಲಿಸಲು ಅಂಪೈರ್‌ಗಳು ಸೂಚಿಸಿದ ಬೆನ್ನಲ್ಲೇ ಪೆವಿಲಿಯನ್‌ನಿಂದ ಅಂಗಣದೊಳಗೆ ಆಗಮಿಸಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೊಹ್ಲಿ, ದಿನದಂತ್ಯದಲ್ಲಿ ಜೈಸ್ವಾಲ್ ಮತ್ತು ರಾಹುಲ್ ಡ್ರೆಸ್ಸಿಂಗ್ ರೂಮ್‌ಗೆ ತೆರಳುವ ವೇಳೆ ಬೌಂಡರಿ ಗೆರೆ ಬಳಿಯೇ ನಿಂತು ಇವರಿಬ್ಬರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಹ್ಲಿ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಗಳು ವೈರಲ್ ಆಗಿವೆ.

ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ಹಾಗೂ ಜಸ್‌ಪ್ರೀತ್ ಬುಮ್ರಾ ಪತ್ನಿ ಸಂಜನಾ ಸಹ ಪಂದ್ಯದ ವೇಳೆ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಂಡರು.

34: ಯಶಸ್ವಿ ಜೈಸ್ವಾಲ್ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ಸಿಕ್ಸರ್ ಬಾರಿಸಿದ ಬ್ಯಾಟರ್ ಎನಿಸಿದರು. ಬ್ರೆಂಡನ್ ಮೆಕ್ಕಲಂ (33) ದಾಖಲೆಯನ್ನು ಅವರು ಮುರಿದರು.

20 ವರ್ಷಗಳ ಬಳಿಕ ಆರಂಭಿಕರ ಶತಕದಾಟ

ಯಶಸ್ವಿ ಜೈಸ್ವಾಲ್- ರಾಹುಲ್ ಆಸೀಸ್ ನೆಲದಲ್ಲಿ 20 ವರ್ಷಗಳ ನಂತರ 100 ಪ್ಲಸ್ ರನ್ ಕಲೆಹಾಕಿದ ಭಾರತದ ಆರಂಭಿಕ ಜೋಡಿ ಎನಿಸಿದರು. ಒಟ್ಟಾರೆ ಈ ಸಾಧನೆ ಮಾಡಿದ 5ನೇ ಭಾರತೀಯ ಜೋಡಿ ಆಗಿದ್ದಾರೆ. 2003 ಹಾಗೂ 2004ರಲ್ಲಿ ವೀರೇಂದ್ರ ಸೆಹ್ವಾಗ್- ಆಕಾಶ್ ಚೋಪ್ರಾ ಜೋಡಿ ಆಸ್ಟ್ರೇಲಿಯಾ ವಿರುದ್ಧ 100 ಪ್ಲಸ್ ಪೇರಿಸಿದ ಕೊನೆಯ ಆರಂಭಿಕರೆನಿಸಿದ್ದರು. ವಿನೂ ಮಂಕಡ್- ಚಂದು ಸರ್ವಾಟೆ (124, 1948), ಗಾವಸ್ಕರ್-ಚೌವ್ಹಾಣ್ (165, 1981), ಗಾವಸ್ಕರ್-ಶ್ರೀಕಾಂತ್ (191, 1986) ಈ ಸಾಧನೆ ಮಾಡಿದ ಹಿಂದಿನ ಆರಂಭಿಕ ಜೋಡಿ.

104. ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಭಾರತ ಎದುರು ದಾಖಲಿಸಿದ 2ನೇ ಕನಿಷ್ಠ ಮೊತ್ತ ಇದಾಗಿದೆ. 1981ರಲ್ಲಿ ಮೆಲ್ಬೋರ್ನ್‌ನಲ್ಲಿ 83 ರನ್‌ಗೆ ಆಲೌಟ್ ಆಗಿದ್ದು ಕನಿಷ್ಠವಾಗಿದೆ.

3. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 150 ಅಥವಾ ಅದಕ್ಕಿಂತ ಕಡಿಮೆ ಮೊತ್ತ ದಾಖಲಿಸಿದಾಗ ಮುನ್ನಡೆ ಪಡೆದ 3ನೇ ದೃಷ್ಟಾಂತ ಇದಾಗಿದೆ. 2002ರಲ್ಲಿ ನ್ಯೂಜಿಲೆಂಡ್ ಎದುರು 99 ರನ್‌ಗೆ ಆಲೌಟ್ ಆಗಿ ಐದು ರನ್ ಮುನ್ನಡೆ ಸಾಧಿಸಿದರೆ, 1936ರಲ್ಲಿ ಇಂಗ್ಲೆಂಡ್ ವಿರುದ್ಧ 147 ರನ್‌ಗಳಿಸಿ 13 ರನ್‌ಗಳ ಮೇಲುಗೈ ಸಾಧಿಸಿತ್ತು.

9. ಜಸ್‌ಪ್ರೀತ್ ಬುಮ್ರಾ ಏಷ್ಯಾದಿಂದ ಹೊರಗಡೆ ನಡೆದ ಟೆಸ್ಟ್‌ಗಳಲ್ಲಿ 9ನೇ ಬಾರಿಗೆ ಐದು ವಿಕೆಟ್ ಗೊಂಚಲು ಪಡೆದರು. ಇದರೊಂದಿಗೆ ಭಾರತೀಯರ ಪೈಕಿ ಅಗ್ರಸ್ಥಾನದಲ್ಲಿರುವ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದರು.

1. ಜಸ್‌ಪ್ರೀತ್ ಬುಮ್ರಾ 2007ರ ಬಳಿಕ ಐದು ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ಟೆಸ್ಟ್ ನಾಯಕ. ಅನಿಲ್ ಕುಂಬ್ಳೆ ಕೊನೆಯ ಸಾಧಕ.

1. ಜೈಸ್ವಾಲ್ ಹಾಗೂ ರಾಹುಲ್ 2018ರ ಬಳಿಕ ಸೇನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ರಾಷ್ಟ್ರದಲ್ಲಿ ಎರಡು ಅವಧಿಯ ಆಟದಲ್ಲಿ ವಿಕೆಟ್ ನೀಡದೆ ಬ್ಯಾಟಿಂಗ್ ನಡೆಸಿದ ಮೊದಲ ಭಾರತೀಯ ಜೋಡಿ ಎನಿಸಿದರು. 2018ರ ಎಂಸಿಜಿ ಟೆಸ್ಟ್‌ನಲ್ಲಿ ಪೂಜಾರ-ಕೊಹ್ಲಿ ಜೋಡಿ ಕೊನೆಯದಾಗಿ ಈ ಸಾಧನೆ ಮಾಡಿತ್ತು.

3. ಜೈಸ್ವಾಲ್-ರಾಹುಲ್ ಆಸೀಸ್ ನೆಲದಲ್ಲಿ ಆರಂಭಿಕರಿಬ್ಬರು 50 ಪ್ಲಸ್ ರನ್‌ಗಳಿಸಿದ 3ನೇ ಭಾರತೀಯ ಜೋಡಿ ಎನಿಸಿತು. ಸುನೀಲ್ ಗಾವಸ್ಕರ್ (70)-ಚೇತನ್ ಚೌವ್ಹಾಣ್ (85), ಗಾವಸ್ಕರ್ (172)- ಕೆ. ಶ್ರೀಕಾಂತ್ (116) ಹಿಂದಿನ 2 ಆರಂಭಿಕ ಜೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net