ಯಂತ್ರಶ್ರೀಯಡಿ ಭತ್ತ ಕೃಷಿ ಕ್ರಾಂತಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ; 500 ಎಕರೆಯಲ್ಲಿ ಯಾಂತ್ರೀಕೃತ ನಾಟಿ

yanthrashri
ಡಾ.ಹರ್ಷ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ಮಾಡುತ್ತಿರುವುದು
Published on

ಮನೋಹರ್ ಬಳಂಜ, ಬೆಳ್ತಂಗಡಿ

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಾರಂಭಿಸಿದ ಕೃಷಿ ಯಂತ್ರಧಾರೆ ಯೋಜನೆ ಸುಮಾರು 10 ವರ್ಷಗಳಿಂದ ನಿರಂತರವಾಗಿ ಭತ್ತ ಬೇಸಾಯಕ್ಕೆ ಪ್ರೋತ್ಸಾಹ ನೀಡುತ್ತಿದೆ. ಕೂಲಿ ಆಳುಗಳ ಸಮಸ್ಯೆಯಿಂದ ಕೃಷಿಕರು ಭತ್ತ ಕೃಷಿ ಕಡಿಮೆ ಮಾಡಿದ್ದು, ಯಾಂತ್ರೀಕೃತ ಬೇಸಾಯ ಪದ್ಧತಿಯಿಂದ ಭತ್ತ ಕೃಷಿಯನ್ನು ಉಳಿಸಲು ಸಾಧ್ಯವಿದೆ ಎನ್ನುವ ಚಿಂತನೆಯೊಂದಿಗೆ ಕೃಷಿ ಯಂತ್ರಧಾರೆ ಯೋಜನೆ ಆರಂಭಿಸಲಾಗಿದೆ. ಇದರಿಂದ ಕೂಲಿಯಾಳುಗಳ ಸಮಸ್ಯೆ ಇಲ್ಲದೆ ನಿಗದಿತ ಸಮಯದಲ್ಲಿ ನಾಟಿ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾ ಪಡೆಯಬಹುದು. ಇಂದು ಯಂತ್ರಶ್ರೀ ಯೋಜನೆ ಮೂಲಕ ತಾಲೂಕಿನಲ್ಲಿ 500 ಎಕರೆ ಪ್ರದೇಶಗಳಲ್ಲಿ ಭತ್ತನಾಟಿ ಮಾಡಲು ಸಿದ್ಧತೆ ಮಾಡಲಾಗಿದೆ.

ಯಂತ್ರಶ್ರೀ ಯೋಧರ ಆಯ್ಕೆ

ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡಲು, ಅದೇ ಗ್ರಾಮದಲ್ಲಿ ಒಬ್ಬ ಅತ್ಯುತ್ತಮ ಭತ್ತ ಕೃಷಿಕನನ್ನು ಯಂತ್ರಶ್ರೀ ಯೋಧನನ್ನಾಗಿ ಆಯ್ಕೆ ಮಾಡಿದ್ದು, ಅವರು ಯಾವುದೇ ಸಂದರ್ಭ ರೈತನ ಮನೆ ಬಾಗಿಲಿಗೆ ಬಂದು ಮಾಹಿತಿ ನೀಡಲು ಸಿದ್ಧವಾಗಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 10 ಮಂದಿ ಯಂತ್ರಶ್ರೀ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ.

ಇಲಾಖೆ ಸಹಕಾರ

ರೈತರಿಗೆ ಸಬ್ಸಿಡಿ ದರದಲ್ಲಿ ಭತ್ತದ ಬೀಜ, ಮಣ್ಣಿನಲ್ಲಿ ಪಿಎಚ್ ರಸಸಾರ ಕಡಿಮೆ ಇರುವ ಗದ್ದೆಗಳಿಗೆ ಸುಣ್ಣ, ಹಸಿರೆಲೆ ಗೊಬ್ಬರ ಹಾಗೂ ಕೀಟನಾಶಕಗಳನ್ನು ಕೃಷಿ ಇಲಾಖೆ ರೈತರಿಗೆ ಸಕಾಲದಲ್ಲಿ ನೀಡುವ ಮೂಲಕ ಭತ್ತ ಕೃಷಿಗೆ ಅಗತ್ಯ ಸಹಕಾರ ಒದಗಿಸುತ್ತಿದೆ. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಅವರನ್ನು ಸಂಪರ್ಕಿಸಿದರೆ ರೈತರಿಗೆ ಅಗತ್ಯ ಮಾಹಿತಿಯನ್ನು ಇಲಾಖೆ ವತಿಯಿಂದ ನೀಡಲಾಗುತ್ತಿದೆ.

ಯಂತ್ರಶ್ರೀ ಬ್ಯಾಂಕ್

ಕೃಷಿ ಪ್ರಾದೇಶಿಕ ಕೇಂದ್ರ ಕಚೇರಿ ಧರ್ಮಸ್ಥಳದಿಂದ ಇಡೀ ರಾಜ್ಯಕ್ಕೆ ಪೂರಕವಾಗಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಹಾಗೂ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಕೃಷಿ ಯೋಜನಾಧಿಕಾರಿಗಳಾದ ಸುಧೀರ್ ಜೈನ್ ಹಾಗೂ ಜಯಾನಂದ ಸಕಾಲದಲ್ಲಿ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸುತ್ತಿದ್ದಾರೆ. ಕೃಷಿ ಅಧಿಕಾರಿ ರಾಮ್ ಕುಮಾರ್(8660891480) ಅವರು ರೈತನ ಮನೆ ಬಾಗಿಲಿಗೆ ಬಂದು ಉಚಿತ ಮಾಹಿತಿ ನೀಡುತ್ತಾರೆ.

ಯಂತ್ರಶ್ರೀ ನರ್ಸರಿ

ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಅಗತ್ಯ ಸಸಿಮಡಿಯನ್ನು ಬೆಳ್ತಂಗಡಿಯ ಮಲೆಬೆಟ್ಟಿನ ಪ್ರಗತಿಪರ ಭತ್ತ ಕೃಷಿಕ ಪ್ರವೀಣ್(9482340154) ಎಂಬುವರು ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ಒದಗಿಸುತ್ತಿದ್ದಾರೆ.

ಬೆಳೆ ವಿಮೆ

ಯೋಜನೆಯ ಸಿಎಸ್‌ಸಿ ಕೇಂದ್ರದ ಮೂಲಕ ಭತ್ತಕ್ಕೆ ಬೆಳೆ ವಿಮೆ ಮಾಡುತ್ತಿದ್ದು, ಆಯಾ ಗ್ರಾಮದಲ್ಲಿ ಯೋಜನೆ ವತಿಯಿಂದ ಸಿಎಸ್‌ಸಿ ಕೇಂದ್ರವಿದೆ. ಒಂದು ಎಕರೆಗೆ 755 ರೂ. ಮೊತ್ತದ ಬೆಳೆ ವಿಮೆಯನ್ನು ರೈತರು ಪಾವತಿಸಿದ್ದಲ್ಲಿ, ಪ್ರಾಕೃತಿಕ ವಿಕೋಪ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ನಷ್ಟ ಅನುಭವಿಸಿದಾಗ ಬೆಳೆ ವಿಮೆಯಿಂದ ಪರಿಹಾರ ಪಡೆದುಕೊಳ್ಳಬಹುದು(ಮಾಹಿತಿಗೆ ತಾಲೂಕಿನ ಸಿಎಸ್‌ಸಿ ನೋಡೆಲ್ ಅಧಿಕಾರಿ ದೀಕ್ಷಿತ್(9916580695)

ರೈತರಿಗೆ ಜಿಎಎಸ್‌ಟಿ ಬಿಲ್

ಕೃಷಿ ಯಂತ್ರಧಾರೆ ಮೂಲಕ ಉಳುಮೆ ಹಾಗೂ ನಾಟಿ ಮಾಡಿದಾಗ ರೈತರಿಗೆ ಜಿಎಸ್‌ಟಿ ನಮೂದಿತ ಟ್ಯಾಕ್ಸ್ ಇನ್ವಾಯ್ಸಾ ನೀಡಲಾಗುವುದು. ರೈತ ತಾನು ಭತ್ತ ಕೃಷಿ ಮಾಡಿದ ಆಧಾರಕ್ಕಾಗಿ ಆ ವರ್ಷದ ದಿನಾಂಕ ನಮೂದಿಸಿ ಇಲಾಖೆಯಿಂದ ಭತ್ತದ ಬೀಜ ತಂದಾಗ ನೀಡಲಾದ ಇಲಾಖೆಯ ಬಿಲ್ ಜತೆ ಇದನ್ನು ನೀಡಿದರೆ ವಿಮೆ ದೊರೆಯುತ್ತದೆ(ಟ್ರಾೃಕ್ಟರ್ ಮತ್ತು ನಾಟಿಯಂತ್ರದ ಬುಕ್ಕಿಂಗ್‌ಗೆ ಕೃಷಿ ಯಂತ್ರಧಾರೆಯ ಪ್ರಬಂಧಕ ಸಚಿನ್ ಅವರನ್ನು ಸಂಪರ್ಕಿಸಬಹುದು 9986623723).

ಟ್ರೇ ಮೂಲಕ ಸಸಿ ಮಡಿ ತಯಾರಿ

ಒಂದು ಎಕರೆಗೆ 70ರಿಂದ 80 ಟ್ರೇ ಬೇಕಾಗುತ್ತದೆ. ಮೊದಲಾಗಿ ಯೋಗ್ಯಭತ್ತದ ಬೀಜ ಆಯ್ಕೆ ಮಾಡಿಕೊಂಡು, ಬೀಜೋಪಚಾರ ಮಾಡಿ ಮೊಳಕೆ ಬರಿಸಿ, ಜರಡಿಯ ಮೂಲಕ ಮಣ್ಣನ್ನು ಸಂಗ್ರಹಿಸಿ, ಕಲ್ಲು ಇಲ್ಲದ ಮಣ್ಣನ್ನು ಟ್ರೇಗೆ ಜೋಡಣೆ ಮಾಡಿ ಬೀಜವನ್ನು ಹಾಕಿ, ದಿನಕ್ಕೆ ಮೂರು ಬಾರಿ ಮಳೆ ಇಲ್ಲದೆ ಇರುವ ಸಂದರ್ಭ ನೀರನ್ನು ಸೋಸ್ ಕ್ಯಾನ್ ಮೂಲಕ ಹಾಕಿ, 18ರಿಂದ 20 ದಿನದಲ್ಲಿ ನಾಟಿಗೆ ಯೋಗ್ಯವಾದ ಸಸಿಮಡಿಗೆ ತಯಾರಾಗುತ್ತದೆ. 8 ಸಾಲು ಮತ್ತು 4 ಸಾಲಿನ ಯಂತ್ರಗಳ ಮೂಲಕ ನಾಟಿ ಮಾಡುತ್ತಿದ್ದು, ಆಯಾ ಗದ್ದೆಯ ವಿಸ್ತೀರ್ಣ ನೋಡಿಕೊಂಡು ಯಂತ್ರದ ಮೂಲಕ ನಾಟಿ ಮಾಡಬಹುದಾಗಿದೆ. ಟೆಂಪರರಿ ಟ್ರೇ ಸಿಎಚ್‌ಎಸ್‌ಸಿ ಕೇಂದ್ರ ಬೆಳ್ತಂಗಡಿಯಲ್ಲಿ ಸಿಗುತ್ತಿದ್ದು ಒಂದು ಟ್ರೇಗೆ 15 ರೂ. ಮೊತ್ತ ಪಾವತಿಸಬೇಕು. ಇದರಲ್ಲಿ ಮೂರು ಅಥವಾ 4 ಬೆಳೆ ತೆಗೆಯಬಹುದಾಗಿದೆ. ಪರ್ಮನೆಂಟ್ ಟ್ರೇ ಕೂಡ ಒದಗಿಸಿಕೊಡಲಾಗುವುದು ಎಂದು ಬೆಳ್ತಂಗಡಿ ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್ ತಿಳಿಸಿದ್ದಾರೆ.

ತಾಲೂಕಿನಲ್ಲಿ ಯೋಜನೆ ವತಿಯಿಂದ ಒಬ್ಬರು ಕೃಷಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅವರು ಯಂತ್ರಶ್ರೀ ಯೋಜನೆ ಅನುಸರಿಸುವ ರೈತರ ಮನೆಗೆ ಭೇಟಿ ನೀಡಿ ಬೀಜದ ಆಯ್ಕೆ, ಭತ್ತದ ಬೀಜೋಪಚಾರ, ಸಸಿ ಮಡಿ ತಯಾರಿ, ಯಂತ್ರದ ಮೂಲಕ ನಾಟಿ, ಗೊಬ್ಬರ ನೀಡುವಿಕೆ ಮತ್ತು ರೋಗ, ಕೀಟಗಳ ಹಾಗೂ ಹುಳದಭಾದೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲಿದ್ದಾರೆ.-ಸುರೇಂದ್ರ, ಯೋಜನಾಧಿಕಾರಿ ಬೆಳ್ತಂಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net