

ದೆಹಲಿ: ದೆಹಲಿ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಹಾಗೆಯೇ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿರುವುದು ವರದಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲ, ಸಾರಿಗೆ ಮತ್ತು ವಿದ್ಯುತ್ ಅಡಚಣೆಯೂ ಉಂಟಾಗಿದೆ. ಸೋಮವಾರ ಯಮುನಾ ನೀರಿನ ಮಟ್ಟವು ಅಪಾಯದ ರೇಖೆಯನ್ನು ಮೀರಿದೆ. ಅಷ್ಟೇ ಅಲ್ಲ, ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದೆ.
ದೆಹಲಿಯಲ್ಲಿ ಮಳೆಯು 41 ವರ್ಷಗಳ ದಾಖಲೆಯನ್ನು ಮುರಿದಿದೆ. ಹಲವಾರು ವಸತಿ ಕಾಲೋನಿಗಳಲ್ಲಿ ಮನೆ ಕುಸಿದು, ಮರಗಳು ಉರುಳಿಬಿದ್ದಿವೆ. ಚಾಣಕ್ಯಪುರಿ, ಕಾಕಾ ನಗರ, ಭಾರತಿ ನಗರ ಮತ್ತು ಎನ್ಡಿಎಂಸಿಯ ವ್ಯಾಪ್ತಿಯಲ್ಲಿರುವ ಇತರ ಪ್ರಮುಖ ರಸ್ತೆಗಳು ಮತ್ತು ಕಾಲೋನಿಗಳಲ್ಲಿಯೂ ಸಹ ಜಲಾವೃತವಾಗಿರುವ ದೃಶ್ಯ ಕಂಡುಬಂದಿವೆ.
ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಭಾರತದಲ್ಲಿ ಭಾರೀ ಮಳೆ ಮುಂದುವರಿಯಲಿದ್ದು, ದೆಹಲಿಯಲ್ಲಿ ಸೋಮವಾರದಂದು ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ.
ಭೂಕುಸಿತ, ಸಾವು
ಹಿಮಾಚಲದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಶಿಮ್ಲಾದಲ್ಲಿ ಭೂಕುಸಿತದಿಂದ 4 ಮಂದಿ ಸಾವನ್ನಪ್ಪಿದ್ದಾರೆ. ಗುಡ್ಡಗಾಡು ರಾಜ್ಯದಲ್ಲಿ ಭಾರೀ ಮಳೆಯು ಮೂರನೇ ದಿನವೂ ಮುಂದುವರಿದ ಕಾರಣ ಸೋಮವಾರ ಬೆಳಗ್ಗೆ ಶಿಮ್ಲಾ-ಕಲ್ಕಾ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.