

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಆಚರಿಸಲಾಯಿತು.
ಚಂದ್ರಮೌಳೇಶ್ವರ ಗುಡಿಯಲ್ಲಿ ವರಮಹಾಲಕ್ಷ್ಮೀ ಪೂಜೆ, ಪುರೋಹಿತ ಪ್ರಸನ್ನ ಹೊಳ್ಳ ನೇತೃತ್ವದಲ್ಲಿ ನಡೆಯಿತು. 1000ಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದರು.
ಯಮುನಾ ಪೂಜೆ: ಆರಂಭದಲ್ಲಿ ಮಹಿಳೆಯರು ಕಲಶದೊಂದಿಗೆ ದರ್ಪಣತೀರ್ಥ ನದಿಗೆ ತೆರಳಿದರು.ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ನದಿಗೆ ಹಾಲು ಸಮರ್ಪಣೆ ಮಾಡಿದರು. ಮಹಿಳೆಯರು ಯಮುನೆಗೆ ಪಂಚಾಮೃತ ಸಮರ್ಪಿಸಿದರು. ಬಳಿಕ ಪುರೋಹಿತರು ನದಿ ಪೂಜೆ ಮಾಡಿದರು. ಬಳಿಕ ಶೃಂಗೇರಿ ಮಠದಲ್ಲಿ ಯಮುನೆ ಪ್ರತಿಷ್ಠಾಪಿಸಿ ಪುರೋಹಿತ ಪ್ರಸನ್ನ ಹೊಳ್ಳ ಪೂಜೆ ನೆರವೇರಿಸಿದರು.
ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಕೌಂಟೆಂಟ್ ರಾಜಲಕ್ಷ್ಮೀ ಶೆಟ್ಟಿಗಾರ್ ಇದ್ದರು.
ಪ್ರಸಾದದೊಂದಿಗೆ ಶ್ರೀ ದೇವಳದ ವತಿಯಿಂದ ಕುಂಕುಮ, ಬಳೆ, ರವಿಕೆ ಕಣವನ್ನು 1000ಕ್ಕೂ ಅಧಿಕ ಮಹಿಳಾ ಭಕ್ತರಿಗೆ ನೀಡಲಾಯಿತು. ಪೂಜೆಯ ವೇಳೆ ದೇವಳದ ನೌಕರರು ಭಜನೆ ನೆರವೇರಿಸಿದರು. ವರಮಹಾಲಕ್ಷ್ಮೀ ಪೂಜೆಗಾಗಿ ಬಾಳೆಯ ದಿಂಡಿನಿಂದ ಸಾಂಪ್ರದಾಯಿಕ ಗುಡಿ ನಿರ್ಮಿಸಿ ಹೂವಿನ ಅಲಂಕಾರ ಮಾಡಲಾಗಿತ್ತು.