

ಯಲಬುರ್ಗಾ: ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಸೋಮವಾರ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತುಂಗಭದ್ರಾ ಮತ್ತು ಕೃಷ್ಣಾನದಿಯಿಂದ ಕೆರೆ ತುಂಬಿಸುವ ಯೋಜನೆ ಮಾಡಿದ್ದೇ ಹಿಂದಿನ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ಹೊರತು ಸಚಿವ ಹಾಲಪ್ಪ ಆಚಾರ್ ಮಾಡಿದ್ದಲ್ಲ. ಇದರಲ್ಲಿ ಅವರ ಪಾತ್ರ ಏನೂ ಇಲ್ಲ. ಯೋಜನೆಗೆ ಆಗಲೇ ಆರ್ಥಿಕ ಅನುಮೋದನೆ, ಟೆಂಡರ್, ಅನುದಾನ ಮಂಜೂರು ಮಾಡಲಾಗಿತ್ತು. ಹೀಗಾಗಿ ಕ್ಷೇತ್ರದ ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಯುತ್ತಿದೆ. ಈ ಕೆಲಸ ನಾನು ಮಾಡಿದ್ದೇನೆ ಎಂದು ವೋಟ್ ರಾಜಕಾರಣಕ್ಕಾಗಿ ಕ್ಷೇತ್ರದ ಹಾಲಿ ಸಚಿವರು ಜನರಿಗೆ ಹೇಳುತ್ತಿರುವುದು ಸರಿಯಲ್ಲ ಎಂದರು.
ಕೃಷ್ಣಾ ಬಿಸ್ಕೀಂ ಯೋಜನೆ ಅಂತಾರಾಜ್ಯಗಳ ಜಲ ವಿವಾದ ಹಿನ್ನೆಲೆಯಲ್ಲಿ ಕಳೆದ 10 ವಷರ್ದಿಂದ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದ ಯೋಜನೆ ವಿಳಂಬವಾಗಿದೆ. ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಜಲವಿವಾದ ರಾಜಿ ಮೂಲಕ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ವಿವಾದ ಮುಂದುವರೆದಿದೆ ಎಂದು ದೂರಿದರು.
ನಾನು ಸಚಿವನಾಗಿದ್ದ ವೇಳೆ ಒತ್ತಡ ಹಾಕಿದ್ದರ ಕಾರಣ ಸಿದ್ದರಾಮಯ್ಯ ಸರ್ಕಾರ 76 ಕೆರೆಗಳಿಗೆ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿತು. ಇದರಿಂದ ತಾಲೂಕಿನ 22 ಕೆರೆಗಳಿಗೆ ಕೃಷ್ಣಾ ನದಿ ನೀರು ಬರುತ್ತಿದೆ. ಬಿಜೆಪಿ ಸರ್ಕಾರ, ಕ್ಷೇತ್ರದ ಹಾಲಿ ಸಚಿವರ ಕೊಡುಗೆ ಏನೂ ಇಲ್ಲ. ನಾವು ಮಾಡಿದ ಕೆಲಸವನ್ನು ಈ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.
31 ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ: ಬೆಳಗ್ಗೆ ತಳಕಲ್‌ನಿಂದ ಆರಂಭಗೊಂಡ ಕಾಂಗ್ರೆಸ್ ಕಾರ್ಯಕರ್ತರ ಬೈಕ್ ರ‌್ಯಾಲಿ ವಿವಿಧ ಗ್ರಾಮಗಳ ಮೂಲಕ ಹಗೇದಾಳ ಜಾಕ್‌ವೆಲ್ ತಲುಪಿತು. 31 ಗ್ರಾಮಗಳಲ್ಲಿ ಸಂಚರಿಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು. ತೆರೆದ ವಾಹನದಲ್ಲಿ ರಾಯರಡ್ಡಿ ಜನರತ್ತ ಕೈ ಬೀಸಿದರು. ಕುಕನೂರಿನ ತಳಕಲ್‌ನಿಂದ, ಯಲಬುರ್ಗಾದ ಸಂಗನಾಳ ಮಾರ್ಗವಾಗಿ ಬೇವೂರು, ಹಿರೇವಂಕಲಕುಂಟಾ, ವಜ್ರಬಂಡಿ, ಹಗೇದಾಳ ಬಸಾಪುರ ಬಳಿಕ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದರು. ಪ್ರಮುಖರಾದ ಅಂದಾನಗೌಡ ಪಾಟೀಲ್, ಸಾವಿತ್ರಿ ಗೊಲ್ಲರ್, ರೇವಣಪ್ಪ ಸಂಗಟಿ, ಜಯಶ್ರೀ ಅರಕೇರಿ, ನಂದಿತಾ ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುಧೀರ್ ಕೊರ್ಲಹಳ್ಳಿ, ಮಲ್ಲು ಜಕ್ಕಲಿ ಇತರರಿದ್ದರು.