

ಯಲಬುರ್ಗಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಾಡಿನ ಮಹಿಳೆಯರ ಬದುಕಿಗೆ ದಾರಿ ದೀಪವಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಸಂಸ್ಥೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದೆ. ನಾಡಿನಾದ್ಯಂತ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಮಹಿಳಾ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಲಕ್ಷಾಂತರ ಕುಟುಂಬಗಳು ಸಾಲ ಪಡೆದು ಉದ್ಯೋಗ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಪಪಂನಿಂದ ಸಂಸ್ಥೆಗೆ ಸಿಎ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದರು.
ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರಕಾಶರಾವ್, ಜಿಲ್ಲಾ ಜನ ಜಾಗೃತಿ ಸದಸ್ಯ ಶರಣಬಸಪ್ಪ ದಾನಕೈ, ಜಿಪಂ ಮಾಜಿ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ್, ತಳಕಲ್ ಎಸ್‌ಬಿಐ ಬ್ಯಾಂಕ್ ಅಧಿಕಾರಿ ರಮೇಶ ಮಾತನಾಡಿದರು.
ಜನಜಾಗೃತಿ ಸಮಿತಿ ಸದಸ್ಯರಾದ ವೀರಣ್ಣ ನಿಂಗೋಜಿ, ಕರಬಸಯ್ಯ, ಸಂಗಣ್ಣ, ತಾಲೂಕು ಯೋಜನಾಧಿಕಾರಿ ಸತೀಶ ಟಿ., ಒಕ್ಕೂಟದ ಅಧ್ಯಕ್ಷೆ ಶೈಲಜಾ ಮಾಲಿಪಾಟೀಲ್ ಇತರರಿದ್ದರು.