ಯುವ ಸಮುದಾಯಕ್ಕಿಲ್ಲ ಯಕ್ಷಗಾನ ಕಲೆಯತ್ತ ಆಸಕ್ತಿ...

Vidya
Published on

ಡಾ.ಎಚ್​.ಎಸ್​. ಬಲ್ಲಾಳ ವಿಷಾದ

ಕಲಾವಿದ ವಿದ್ಯಾಧರ ರಾವ್​ಗೆ ಯಕ್ಷ ಸಾಧಕ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದಿನ ಯುವ ಜನಾಂಗಕ್ಕೆ ಯಕ್ಷಗಾನದತ್ತ ಆಸಕ್ತಿಯಿಲ್ಲ. ಪೌರಾಣಿಕ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಕರನ್ನು ತೊಡಗಿಸಲು ಕಾರ್ಯಯೋಜನೆ ಕೈಗೊಳ್ಳಲಾಗಿದೆ. 20ನೇ ಶತಮಾನದಲ್ಲಿ ಮಟಪಾಡಿ ವೀರಭದ್ರ ನಾಯಕ ಸ್ಟಾರ್​ ಕಲಾವಿದರಾಗಿದ್ದರೆ, 21ನೇ ಶತಮಾನದಲ್ಲಿ ವಿದ್ಯಾಧರ ರಾವ್​ ಜಲವಳ್ಳಿ ಸ್ಟಾರ್​ ಕಲಾವಿದರಾಗಿದ್ದಾರೆ. ಅಂತಹ ಸಾಧಕರನ್ನು ಗೌರವಿಸಲೆಂದೇ ಯಕ್ಷ ಸಾಧಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ಹೇಳಿದರು.

ಉಡುಪಿಯ ಪುರಭವನದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ, ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ ಅಂಬಲಪಾಡಿ ಹಾಗೂ ಉಜ್ವಲ ಡೆವಲಪರ್ಸ್​ ಉಡುಪಿ ಆಶ್ರಯದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್​ (ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮರಣಾರ್ಥ ಜುಲೈ 19ರಂದು ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡಗುತಿಟ್ಟು ಯಕ್ಷಗಾನ ರಂಗದ ಅಭಿನಯ ಚಕ್ರವರ್ತಿ ಬಿರುದಾಂಕಿತ ಖ್ಯಾತ ಕಲಾವಿದ ವಿದ್ಯಾಧರ ರಾವ್​ ಜಲವಳ್ಳಿ ಅವರಿಗೆ ಯಕ್ಷ ಸಾಧಕ ಪ್ರಶಸ್ತಿ ಪ್ರದಾನಗೊಳಿಸಿ ಮಾತನಾಡಿದರು.

ತಂದೆಯಂತೆ ಬೆಳೆದ ಪುತ್ರ

Kondadakuli
ಕೊಂಡದಕುಳಿ ಹೆಗಡೆ ಅವರನ್ನುಗೌರವಿಸಲಾಯಿತು.

ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಮಾತನಾಡಿ, ಖ್ಯಾತ ಕಲಾವಿದರಾದ ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಇತರರ ಮಕ್ಕಳು ತಂದೆಯ ಮಟ್ಟಕ್ಕೆ ಬಂದಿಲ್ಲ. ಆದರೆ, ವಿದ್ಯಾಧರ ಅವರು ತಂದೆ ಜಲವಳ್ಳಿ ವೆಂಕಟೇಶ ರಾವ್​ ಅವರ ಸಮನಾಗಿ ಬೆಳೆದಿದ್ದಾರೆ. ಸದ್ಯ ತಿರುಗಾಟದ ಕಲಾವಿದರಲ್ಲಿ ವಿದ್ಯಾಧರ ಶ್ರೇಷ್ಠ ಹಾಗೂ ನೈಪುಣ್ಯತೆ ಸಾಧಿಸಿದ ಕಲಾವಿದರಾಗಿದ್ದಾರೆ ಎಂದರು.

ನಾಡೋಜ ಜಿ.ಶಂಕರ್​, ಉಜ್ವಲ ಡೆವೆಲಪರ್ಸ್​ನ ಎಂಡಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರನ್ನು ಕಲಾವಿದರ ಪರವಾಗಿ ಗೌರವಿಸಲಾಯಿತು.

ಭಾಗವತ ಉಮೇಶ ಸುವರ್ಣ ಗಣಪತಿ ಸ್ತುತಿ ಪ್ರಾರ್ಥಿಸಿದರು. ಮೇಳಗಳ ಯಜಮಾನ ಪಿ.ಕಿಶನ್​ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಭುವನಪ್ರಸಾದ ಹೆಗ್ಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಯಕ್ಷಗಾನ ಕಲೆ ಇರುವವರೆಗೂ ಸ್ಮರಣೀಯರಾಗಿರುವ ಕಲಾವಿದ ಗುರು ವೀರಭದ್ರ ನಾಯಕ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿದ ನಾನು ವಿನೀತನಾಗಿದ್ದೇನೆ. ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರೂ ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳದಲ್ಲಿ ಔನ್ನತ್ಯ ಪಡೆದಿದ್ದೇನೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಯಕ್ಷಗಾನದ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ. | ವಿದ್ಯಾಧರ ರಾವ್​ ಜಲವಳ್ಳಿ. ಯಕ್ಷಗಾನ ಕಲಾವಿದ.

ದಿಗ್ಗಜ ಕಲಾವಿದರಿಂದ ಯಕ್ಷಗಾನ ಪ್ರದರ್ಶನ

ಪ್ರಶಸ್ತಿ ಪ್ರದಾನದ ಕಾರ್ಯಕ್ರಮದ ಬಳಿಕ ಯಕ್ಷಗಾನದ ದಿಗ್ಗಜ ಕಲಾವಿದರಿಂದ ಕೃಷ್ಣಾರ್ಜುನ ಕಾಳಗ ಹಾಗೂ ರಾಜಾ ಭದ್ರಸೇನ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್​ ಜನ್ಸಾಲೆ, ಚಂಡೆ- ಪ್ರಜ್ವಲ ಮುಂಡಾಡಿ, ಮದ್ದಳೆ- ಶಶಾಂಕ ಆಚಾರ್ಯ ಕಿರಿಮಂಜೇಶ್ವರ ಪಾಲ್ಗೊಳ್ಳಲಿದ್ದಾರೆ. ಕೃಷ್ಣಾರ್ಜುನ ಕಾಳಗದ ಮುಮ್ಮೇಳದಲ್ಲಿ ಅರ್ಜುನನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ- ನೀಲ್ಕೋಡು ಶಂಕರ ಹೆಗಡೆ, ಸುಭದ್ರೆ- ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ದಾರುಕ- ರವೀಂದ್ರ ದೇವಾಡಿಗ, ಅಭಿಮನ್ಯು- ಚಂದ್ರಹಾಸ ಗೌಡ ಹೊಸಪಟ್ನ, ಭೀಮ-ಕೆ.ಜಿ.ಕಾರ್ತಿಕ, ರುಕ್ಮಿಣಿ- ಸುಧೀರ ಉಪ್ಪೂರು. ರಾಜಾ ಭದ್ರಸೇನ ಮುಮ್ಮೇಳದಲ್ಲಿ ಭದ್ರಸೇನನಾಗಿ ವಿದ್ಯಾಧರ ರಾವ್​ ಜಲವಳ್ಳಿ, ದೃಢವರ್ಮ- ಕಾರ್ತಿಕ ಕಣ್ಣಿಮನೆ, ವತ್ಸಾಖ್ಯ- ಉದಯ ಹೆಗಡೆ ಕಡಬಾಳ, ವಿದ್ಯುಲ್ಲೋಚನ- ಪವನಕುಮಾರ್​ ಸಾನ್ಮನೆ, ರತ್ನಾವತಿ- ಸಂತೋಷ ಹಿಲಿಯಾಣ ಪಾತ್ರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net