

ಉಡುಪಿ: ಹಿಂದಿನ ಕಾಲದಲ್ಲಿ ದೇವಸ್ಥಾನಗಳು ಶಿಕ್ಷಣ, ಕಲೆ, ನ್ಯಾಯ ತೀರ್ಮಾನದ ಮೂಲಸ್ಥಾನವಾಗಿತ್ತು. ಕೃಷ್ಣನ ನೆಲದಿಂದ ಮೂಡಿಬಂದ ಯಕ್ಷಗಾನ ಇಂದು ನಾಡಿನಾದ್ಯಂತ ವ್ಯಾಪಕವಾಗಿ ಪಸರಿಸಿದ್ದು, ಇದು ಕೇವಲ ಮನೋರಂಜನೆಗೆ ಸೀಮಿತವಾಗದೆ ಸಂಸತಿ, ಭವ್ಯ ಪರಂಪರೆಯನ್ನು ಪ್ರತಿನಿಧಿಸುವ ಕಲೆಯಾಗಿ ಗುರುತಿಸಿಕೊಂಡಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಗುರುವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಉಡುಪಿ, ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಒಟ್ಟು 90 ಪ್ರೌಢಶಾಲೆಗಳಲ್ಲಿ ಆರಂಭಗೊಳ್ಳಲಿರುವ ಯಕ್ಷಗಾನ ತರಗತಿ ಉದ್ಘಾಟಿಸಿ ಅಶೀರ್ವದಿಸಿದರು.
ಇಂದಿನ ಜನ ಮಾನಸದಲ್ಲಿ ನಮ್ಮ ಪುರಾಣ, ಇತಿಹಾಸಗಳು ಅಚ್ಚಳಿಯದೆ ಉಳಿಯಲು ಯಕ್ಷಗಾನ ಮೂಲ ಕಾರಣ. ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುವ ಮೂಲಕ ಸುಪ್ತವಾಗಿದ್ದ ಅಭಿಮಾನವನ್ನು ಬಡಿದೆಬ್ಬಿಸಿದೆ. ಉಳಿದ ಕಲಾಪ್ರಕಾರಗಳ ಪ್ರಚಾರಕ್ಕೆ ಈ ಅಭಿಯಾನ ಮಾದರಿಯಾಗಿದೆ. ಯಕ್ಷಗಾನ ಪ್ರಚಾರ ಪರ್ಯಾಯದ ಅವಿಭಾಜ್ಯ ಅಂಗವಾಗಿದ್ದು, ಈ ಮೂಲಕ ಕೃಷ್ಣನಿಗೆ ಯಾರಾಧನೆ ನಡೆಯುತ್ತಿದೆ ಎಂದು ಹೇಳಿದರು.
ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಯಕ್ಷ ಶಿಕ್ಷಣ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಮತ್ತು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ಬೀ. ವಿಜಯಬಲ್ಲಾಳ್ ಶುಭಾಶಂಸನೆಗೈದರು. ಅಭ್ಯಾಗತರಾಗಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ವಲಯ ಶಿಕ್ಷಣಾಧಿಕಾರಿಗಳಾದ ಡಾ. ಯಲ್ಲಮ್ಮ, ಶಬನಾ ಅಂಜುಮ್, ಶೋಭಾ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.