ಯಕ್ಷಗಾನ ಚೌಕಟ್ಟು, ಪರಂಪರೆ ಮುರಿಯದಿರಿ

yakshagana
ಉಡುಪಿಯಲ್ಲಿ ಆಯೋಜಿಸಿದ್ದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವವನ್ನು ಡಾ.ತಲ್ಲೂರು ಶಿವರಾಂ ಶೆಟ್ಟಿ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೇಷ್ಠ ಪಾರಂಪರಿಕ ಯಕ್ಷಗಾನ ಕಲೆ ಉಳಿಸುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಕೋಟದ ಸ್ಥಾಪಕ ಎಚ್.ಶ್ರೀಧರ್ ಹಂದೆ ಕೊಡುಗೆ ಅನನ್ಯ. ಕಲಾವಿದರು ಯಕ್ಷಗಾನದ ಚೌಕಟ್ಟು, ಪರಂಪರೆ ಮುರಿಯಬಾರದು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಹೇಳಿದರು.

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಾಲಿಗ್ರಾಮ ಯಕ್ಷಗಾನ ಮೇಳ ಕೋಟ 50ನೇ ವಾರ್ಷಿಕೋತ್ಸವದ ನಿಮಿತ್ತ ಭಾನುವಾರ ಸುವರ್ಣ ಪರ್ವ-8 ಹಾಗೂ ಮಕ್ಕಳ ಯಕ್ಷಗಾನ ರಂಗಭೂಮಿ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕಾರ್ಪೋರೇಟ್ ಸಂಸ್ಕೃತಿ ಇರಲಿ: ಅರ್ಥಧಾರಿ ಡಾ.ಎಂ.ಪ್ರಭಾಕರ್ ಜೋಶಿ ಪ್ರಧಾನ ದಿಕ್ಸೂಚಿ ಭಾಷಣ ಮಾಡಿ, ಕಾರ್ಪೋರೇಟ್ ಸಂಸ್ಕೃತಿಯಿಂದಲೂ ದೇಶಕ್ಕೆ ಒಳಿತಾಗಲಿದೆ. ಹೀಗಾಗಿ ಈ ಸಂಸ್ಕೃತಿ ವಿರೋಧಿಸಬೇಡಿ, ಕಡೆಗಣಿಸಬೇಡಿ. ಮಕ್ಕಳೇ ಒಂದು ರಂಗಭೂಮಿಯಾಗಿದ್ದಾರೆ. ಹೀಗಾಗಿ ಅವರ ವಯಸ್ಸು, ಮನೋಭಾವ, ಸಂವೇದನೆಗೆ ಸರಿಹೊಂದುವ ಪಾತ್ರ ಹಾಗೂ ಕಥೆಯ ಸೃಷ್ಟಿಯಾಗಬೇಕು. ಕಥೆಗಳ ಸಾಗರವೇ ಆಗಿರುವ ಪಂಚತಂತ್ರದ ಕಥೆಗಳನ್ನು ಯಕ್ಷಗಾನಕ್ಕೆ ತರಬೇಕು. ಯಕ್ಷಗಾನ ರಂಗಭೂಮಿಯಿಂದು ಬಹಮುಖಿ ಚಲನೆಯಲ್ಲಿದೆ. ಯಕ್ಷಗಾನದ ರಸಿಕತೆ ಸಿನಿಮೀಯವಾಗುತ್ತಿದೆ. ಭಯಕ್ಕೂ ರಸಿಕತೆಯ ಕುಣಿತ ಕಂಡುಬಂದರೆ ಆಭಾಸವಾಗುತ್ತದೆ ಎಂದರು.

ಸನ್ಮಾನ: ಮಕ್ಕಳ ಕ್ಷೇತ್ರದಲ್ಲಿ 34 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಾಧಕ ಕೇಶವ್ ಬಡಾನಿಡಿಯೂರು ಅವರಿಗೆ ಸುವರ್ಣ ಪರ್ವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಲಾಪೋಷಕರಾದ ಲಯನ್ ಸುರೇಶ್ ಪ್ರಭು, ಭುವನಪ್ರಸಾದ್ ಹೆಗ್ಡೆ, ಲಯನ್ ವಿ.ಜಿ.ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಎಚ್.ಶ್ರೀಧರ್ ಹಂದೆ, ಅಧ್ಯಕ್ಷ ಬಲರಾಮ್ ಕಲ್ಕೂರ ಕೆ., ಉಪಾಧ್ಯಕ್ಷ ಎಚ್.ಜನಾರ್ದನ್ ಹಂದೆ ಉಪಸ್ಥಿತರಿದ್ದರು. ಮೇಳದ ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ಸ್ವಾಗತಿಸಿದರು. 50 ವರ್ಷದ ಹಿಂದೆ ಮಕ್ಕಳ ಮೇಳದಲ್ಲಿ ಪಾತ್ರ ನಿರ್ವಹಿಸಿದ್ದ ಮೋಹನದಾಸ್ ಶ್ಯಾನಭಾಗ್ ಅತಿಥಿಗಳನ್ನು ಗೌರವಿಸಿದರು. ವಿನುತಾ ಎಸ್.ಹಂದೆ ಕಾರ್ಯಕ್ರಮ ನಿರ್ವಹಿಸಿದರು.

ವಿಚಾರಗೋಷ್ಠಿ, ಯಕ್ಷಗಾನ ಪ್ರದರ್ಶನ

ಯಕ್ಷಗಾನ ಗುರು ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ್ ಅಧ್ಯಕ್ಷತೆಯಲ್ಲಿ ಮಕ್ಕಳ ಯಕ್ಷಗಾನ ವಿಷಯ ಕುರಿತು ವಿಚಾರಗೋಷ್ಠಿ ನಡೆಯಿತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಪ್ರಸಂಗ ಸಾಹಿತಿ ಪ್ರೊ.ಶ್ರೀ ಧರ್ ಡಿ.ಎಸ್. ಪ್ರಸಂಗ ಸಾಹಿತ್ಯ ಕುರಿತು, ಯಕ್ಷಗರು ಪ್ರಸಾದಕುಮಾರ್ ಮೊಗಬೆಟ್ಟು ತರಬೇತಿಯ ಸವಾಲುಗಳು ಕುರಿತು, ರಂಗಕರ್ಮಿ ಅಭಿಲಾಷ್ ಎಸ್. ರಂಗ ಪ್ರಸ್ತುತತೆ ಕುರಿತು ವಿಚಾರ ಮಂಡಿಸಿದರು. ತೆಕ್ಕಟ್ಟೆ ಯಶಸ್ವಿ ಕಲಾವೃಂದದ ಯಕ್ಷಗಾನ ಗುರು ದೇವದಾಸ್ ರಾವ್ ಕೊಡ್ಲಿ ಹಾಗೂ ಪತ್ರಕರ್ತೆ ರಾಜಲಕ್ಷ್ಮೀ ಕೋಡಿಬೆಟ್ಟು ಪ್ರತಿಸ್ಪಂದನ ನಿರ್ವಹಿಸಿದರು. ಬಳಿಕ ರಾಜೇಶ್ ಕಟೀಲು ನಿರ್ದೇಶನದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಅವರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net