ಮೇ 31ರಂದು ಯಕ್ಷಗಾನ ಕಲಾವಿದರ ಸಮಾವೇಶ...

Kalaranga Lead
Published on

ಅಧ್ಯಕ್ಷ ಎಂ.ಗಂಗಾಧರ ರಾವ್​ ಮಾಹಿತಿ

50 ಮಂದಿಗೆ ಸುವರ್ಣ ಪುರಸ್ಕಾರ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನ ಕಲಾರಂಗ (ರಿ.) ಉಡುಪಿಯ 50ನೇ ವರ್ಷದ ಪ್ರಯುಕ್ತ ಸುವರ್ಣ ಸಡಗರ ಮತ್ತು ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ ಮೇ 31ರಂದು ಬೆಳಗ್ಗೆ 10 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಸಹಕಾರದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉದ್ಯಮಿ ಗೋಪಾಲ ಸಿ. ಬಂಗೇರ ಪಾಲ್ಗೊಳ್ಳಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್​ ಮಾಹಿತಿ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಮೇ 26ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 9ರಿಂದ ಯಕ್ಷಗಾನ ಕಲಾವಿದರಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಕೆಎಂಸಿ ಮಣಿಪಾಲದ ವೈದ್ಯರು ಪರೀಕ್ಷಿಸಲಿದ್ದಾರೆ ಎಂದರು.

50 ಕಲಾವಿದರಿಗೆ ಪುರಸ್ಕಾರ

ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​ ಮಾತನಾಡಿ, ಮಧ್ಯಾಹ್ನ 2:30ಕ್ಕೆ ಸುವರ್ಣ ಸಡಗರ ಸಂಪನ್ನ ಕಾರ್ಯಕ್ರಮ ನಡೆಯಲಿದೆ. 4-5 ದಶಕಗಳ ಕಾಲ ಯಕ್ಷಗಾನ ಕಲಾ ಸೇವೆ ಸಲ್ಲಿಸಿದ, 70 ವರ್ಷ ದಾಟಿದ 50 ಕಲಾವಿದರಿಗೆ ಫಲಕ ಹಾಗೂ ತಲಾ 50 ಸಾವಿರ ರೂ. ಮೊತ್ತದ ಗೌರವದೊಂದಿಗೆ ಯಕ್ಷಗಾನ ಕಲಾರಂಗ-ಸುವರ್ಣ ಪುರಸ್ಕಾರ ಪ್ರಶಸ್ತಿ ನೀಡಲಾಗುತ್ತಿದೆ. ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರ ಸಂದೇಶ ನೀಡಲಿದ್ದಾರೆ. ನಾಡೋಜ ಜಿ.ಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಎಲ್ಲರಿಗೂ ಉಡುಗೊರೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರಿಗೂ ಸಹ ಉಡುಗೊರೆ ನೀಡಲಾಗುತ್ತಿದ್ದು, ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ಸುವರ್ಣ ಉಡುಗೊರೆ ವಿತರಿಸಲಿದ್ದಾರೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷ ಡಾ. ಎಚ್​.ಎಸ್​. ಶೆಟ್ಟಿ ಸುವರ್ಣ ನುಡಿಗಳನ್ನಾಡಲಿದ್ದಾರೆ. ಗತಿಸಿದ ಕಲಾವಿದರ ಕುಟುಂಬಕ್ಕೂ ಸಹ ಸಾಂತ್ವನ ನಿಧಿ ನೀಡಲಾಗುತ್ತಿದೆ. ಜಿಲ್ಲೆಯ ಸಂಸದ, ಎಲ್ಲ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್​.ವಿ. ಭಟ್​, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್​, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಇದ್ದರು.

ಕಲೆಯ ಕುರಿತು ಕಲಾವಿದರಿಂದ ಮುಕ್ತ ಚರ್ಚೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಬೆಳಗ್ಗೆ 10:30ಕ್ಕೆ ತ್ರಿಶೂರ್​ನ ಇಂಞಲಕುಡದ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂ ಅವರಿಂದ ಸೀತಾಪಹರಣಂ-ಜಟಾಯುವಧಂ ಎಂಬ ಕೂಡಿಯಾಟ್ಟಂ ಪ್ರದರ್ಶನ ನಡೆಯಲಿದೆ. ಬಳಿಕ 11:30ಕ್ಕೆ ಯಕ್ಷಗಾನ ಕಲೆಯ ಕುರಿತು ಕಲಾವಿದರಿಂದಲೇ ಕಲೆ ಪೂರ್ಣಾವಧಿ ಉದ್ಯೋಗ ಆಗಿರಬೇಕೆ? ಉಪವೃತ್ತಿ ಆಗಿರಬೇಕೇ? ಎಂಬ ವಿಷಯ ಕುರಿತು ಮುಕ್ತ ಚರ್ಚೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net