ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತದಿಂದ ನಿಧನ

sundar rao
ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್
Published on

ಪುತ್ತೂರು: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತಕ್ಕೀಡಾಗಿ ಜುಲೈ 5ರಂದು ನಿಧನರಾಗಿದ್ದಾರೆ. 34 ನೆಕ್ಕಿಲಾಡಿ ಸಮೀಪದ ಶಾಂತಿನಗರ ಬೇರಿಕೆ ನಿವಾಸಿ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಆರು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ಸೇವೆ

1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ ರಾವ್ 34 ನೆಕ್ಕಿಲಾಡಿ ಸಮೀಪದ ಶಾಂತಿನಗರ ಬೇರಿಕೆಯಲ್ಲಿ ವಾಸವಾಗಿದ್ದರು. ಆರು ದಶಕಕ್ಕೂ ಮಿಕ್ಕಿ ಕಲಾ ಸೇವೆ ಮಾಡಿದ ಇವರು, ಧರ್ಮಸ್ಥಳ ಮೇಳವೊಂದರಲ್ಲಿಯೇ ನಿರಂತರ 50 ವರ್ಷಗಳ ಸೇವೆ ಮಾಡಿದ್ದಾರೆ. ಸ್ತ್ರೀವೇಷಧಾರಿಯಾಗಿ ಪ್ರಸಿದ್ಧರಾಗಿರುವ ಶ್ರೀಧರ ರಾವ್ ಪುರುಷ ವೇಷದಲ್ಲಿಯೂ ಸೈ ಅನ್ನಿಸಿಕೊಂಡಿದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ದೇವಿ, ಈಶ್ವರ, ಸೀತಾ ಪರಿತ್ಯಾಗದ ಸೀತೆ, ಲಕ್ಷ್ಮಣ, ಸುದರ್ಶನ ವಿಜಯದ ಲಕ್ಷ್ಮಿ, ವಿಷ್ಣು, ದಮಯಂತಿ ಸ್ವಯಂವರದ ದಮಯಂತಿ, ಭೀಷ್ಮ ವಿಜಯದ ಅಂಬೆ, ದೇವಿ ಮಹಾತ್ಮೆಯ ದೇವಿ ಮೊದಲಾದ ಪಾತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ರಾವ್‌ರವರ ಅಮ್ಮು ಬಳ್ಳಾಲ್ತಿ, ದಾಕ್ಷಾಯಿಣಿ, ಲಕ್ಷ್ಮಿ ಸುಭದ್ರೆಯ ಪಾತ್ರದ ಮೂಲಕವೂ ಅಪಾರ ಅಭಿಮಾನಿಗಳನ್ನು ಪಡೆದಿದ್ದರು. ಕೊರಗ ಶೆಟ್ರ ಇರಾ ಮೇಳದ ಮೂಲಕ ಯಕ್ಷ ಪಯಣ ಆರಂಭಿಸಿದ್ದ ಶ್ರೀಧರ ರಾವ್ ಯಕ್ಷಗಾನ ದಿಗ್ಗಜ ಶೇಣಿಯವರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿಯಾಗಿ, ತಾರೆಯಾಗಿ ಸಾಥ್ ನೀಡಿದ್ದರು.

ವಿವಿಧ ಯಕ್ಷಗಾನ ಮೇಳಗಳಲ್ಲಿ ಪಾತ್ರ

ಕುಂಬ್ಳೆ ಶ್ರೀಧರ ರಾವ್ ಅವರು ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ವ್ಯವಸಾಯ ಮಾಡಿ, ಶ್ರೀ ಧರ್ಮಸ್ಥಳ ಮೇಳದಿಂದ ನಿವೃತ್ತಿಯಾದರು. ದಾಕ್ಷಾಯಿಣಿ, ಸುಭದ್ರೆ, ದ್ರೌಪದಿ, ಅಮ್ಮುದೇವಿ ಮೊದಲಾದ ಸ್ತ್ರೀ ಪಾತ್ರಗಳಿಂದ ಖ್ಯಾತರಾಗಿದ್ದವರು. ಮೇಳ ತಿರುಗಾಟದ ಒಂದು ಕಾಲಘಟ್ಟದಲ್ಲಿ ಸ್ತ್ರೀ ಪಾತ್ರದಿಂದ ಪುರುಷ ಪಾತ್ರಕ್ಕೆ ಬದಲಾದವರು. ಕೀರ್ತಿಶೇಷರಾದ ಡಾ.ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಶಂಕರ ನಾರಾಯಣ ಸಾಮಗ ಸಹಿತ ಹಲವು ಹಿರಿಯರ ಒಡನಾಟದಲ್ಲಿದ್ದರು.

ಪ್ರಶಸ್ತಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭ, ಎಡನೀರು ಮಠದಲ್ಲಿ ಮಾತ್ರವಲ್ಲದೆ ಇನ್ನೂ ಹಲವೆಡೆ ಇವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನ ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಜಸ್ಟೀಸ್ ಕೆ.ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಯುಕ್ತ ಕೊಡ ಮಾಡುವ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳಲ್ಲಿ ಸ್ತ್ರೀ ಪಾತ್ರಕ್ಕೆ ಪ್ರತ್ಯೇಕವಾದ ಸ್ವಂತಿಕೆಯ ಛಾಪನ್ನು ಒತ್ತಿದ್ದ ಇವರು ತಾಳಮದ್ದಳೆ ಅರ್ಥದಾರಿಯೂ ಆಗಿದ್ದರು. ಇತ್ತೀಚೆಗಷ್ಟೇ ದಶಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ. ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಕೊಡ ಮಾಡುವ ದಶಮಾನೋತ್ಸವ ಪ್ರಶಸ್ತಿಗೆ ಕುಂಬ್ಳೆ ಶ್ರೀಧರ ರಾವ್ ಆಯ್ಕೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net