ಜಾತಿ ಗಣತಿ ಮೂಲಕ ಸಮಾಜ ಒಡೆಯುವ ಕೆಲಸ: ಶಾಸಕ ಧೀರಜ್ ಮುನಿರಾಜ್ ಆರೋಪ

24
Published on

ಪುತ್ತೂರು ಗ್ರಾಮಾಂತರ : ಜಾತಿ ಗಣತಿಯಲ್ಲಿ ಹಿಂದುಳಿದರು, ದಲಿತರನ್ನು ಹಿಂದೆ ತಳ್ಳುವ ಕೆಲಸ ಸರ್ಕಾರದಿಂದ ಆಗಿದೆ. ಸಣ್ಣ ಸಮುದಾಯವಾಗಿರುವ ಗೊಲ್ಲ ಹಾಗೂ ಯಾದವ ಒಂದೇ ಸಮುದಾಯವಾಗಿದ್ದರೂ ಗೊಲ್ಲ ಸಮಾಜವನ್ನು ಪ್ರವರ್ಗ 1ಎ ಹಾಗೂ ಯಾದವ ಸಮಾಜವನ್ನು ಪ್ರವರ್ಗ 1 ಬಿ ಎಂದು ವಿಂಗಡಿಸಿ ಒಂದೇ ಸಮುದಾಯವನ್ನು ಒಡೆದು ಆಳುವ ಕೆಲಸ ಜಾತಿ ಗಣತಿಯಿಂದ ಆಗಿದೆ ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಹೇಳಿದರು.

ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಭಾನುವಾರ ಯಾದವ ಸಭಾ ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಹಾಗೂ ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಜಿಲ್ಲಾ ಯಾದವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ, ಸಮುದಾಯದ ಸಮಸ್ಯೆ, ಸೌಲಭ್ಯಗಳನ್ನು ಈಡೇರಿಸಲು ಯಾದವ ನಿಗಮ ಮಂಡಳಿ ಸ್ಥಾಪನೆಯಾಗಬೇಕು. ಯಾದವ ಸಭಾದ ಸಮುದಾಯ ಭವನ ನಿರ್ಮಾಣವಾಗಬೇಕು. ಯಾದವ ಸಮಾಜದೊಂದಿಗೆ ಸದಾ ಇದ್ದು ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.

ಯಾದವಾ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಕುಂಟಾರು ರವೀಶ ತಂತ್ರಿ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್‌ಕುಮಾರ್ ಪುತ್ತಿಲ, ಉದ್ಯಮಿ ಗಿರೀಶ್ ಆಳ್ವ, ಪಾಣಾಜೆ ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ, ಪಾಣಾಜೆ ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ, ಯಾದವಾ ಸಭಾ ಕರ್ನಾಟಕ ಕೇಂದ್ರ ಸಮಿತಿ ಸಲಹಾ ಮಂಡಳಿ ಅಧ್ಯಕ್ಷ ಸುಧಾಮ ಆಲೆಟ್ಟಿ, ಪದಾಧಿಕಾರಿಗಳಾದ ಗೋಪಾಲ ಅರಿಕೆಪದವು, ಶ್ರೀಹರಿ ನಡುಕಟ್ಟ ಪಾಣಾಜೆ, ವಿ.ವಿ.ಬಾಲನ್, ಪುರುಷೋತ್ತಮ ಮತ್ತಿತರರು ಇದ್ದರು. ಯಾದವ ಸಭಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿದರು. ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಚಂದ್ರಶೇಖರ ಬಿ. ಠರಾವು ಮಂಡಿಸಿದರು. ಪುತ್ತೂರು ತಾಲೂಕು ಯುವ ವೇದಿಕೆ ಕಾರ್ಯದರ್ಶಿ ಶಿವಪ್ರಸಾದ್ ತಲೆಪ್ಪಾಡಿ ವಂದಿಸಿದರು. ನವೀನ್ ಕುಮಾರ್ ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಎಲ್ಲ ಜಯಂತಿಗಳಿಗೂ ರಜೆ ಇರುವಂತೆ ಶ್ರೀಕೃಷ್ಣ ಜಯಂತಿಗೂ ಸರ್ಕಾರಿ ರಜೆ ಕಡ್ಡಾಯಕೊಡಬೇಕು. ಇದಕ್ಕಾಗಿ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ವಿದ್ಯಾರ್ಥಿನಿಲಯಗಳಲ್ಲಿ ಯಾದವ ಸಮುದಾಯಕ್ಕೆ ಹೆಚ್ಚುವರಿ ಸೀಟ್ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಭಾಗೀರಥಿ ಮುರುಳ್ಯ ಶಾಸಕಿ

ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ, ಉಡುಪಿ ಜಿಲ್ಲಾ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸುರೇಶ್ ಕಣೆಮರಡ್ಕ, ದ.ಕ. ಜಿಲ್ಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕರುಣಾಕರ ಮಣಿಯಾಣಿ, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕೇಪು ಗ್ರಾಪಂ ಅಧ್ಯಕ್ಷ ರಾಘವ ಮಣಿಯಾಣಿ, ಕಲಾರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಧ್ಯಾ ಮಂಡೆಕೋಲು ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net