

ಬಣಕಲ್ (ಚಿಕ್ಕಮಗಳೂರು): ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಸಾಹಿತಿ ರಾಜೇಶ್ವರಿ ತೇಜಸ್ವಿ (86) ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ 6.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳು, ಕುಟುಂಬವರ್ಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿರುವ ಪುತ್ರಿ ಸುಶ್ಮಿತಾ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಂಜೆ 5.30 ಗಂಟೆಗೆ ರಾಜೇಶ್ವರಿ ಅವರ ದೇಹವನ್ನು ಬೌರಿಂಗ್ ಆಸ್ಪತ್ರೆಯ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು. ರಾಜೇಶ್ವರಿ 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಹೆಣ್ಣುಮಕ್ಕಳೂ ಸ್ವಾವಲಂಬಿಯಾಗಿ ಬದುಕಲು ವಿದ್ಯಾಭ್ಯಾಸ ಕೊಡಬೇಕೆನ್ನುವ ತಂದೆಯ ಉದಾತ್ತ ಧ್ಯೇಯದಿಂದಾಗಿ ರಾಜೇಶ್ವರಿ ತತ್ತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಬಂದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿ ಪ್ರೀತಿಸಿ, 1966ರಲ್ಲಿ ವಿವಾಹವಾದರು. ತೇಜಸ್ವಿ ದಂಪತಿಗೆ ಈಶಾನ್ಯೆ ಮತ್ತು ಸುಶ್ಮಿತಾ ಎಂಬ ಪುತ್ರಿಯರಿದ್ದು, ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊದಲ ಪುಸ್ತಕ. ಈ ಕೃತಿ ಈವರೆಗೆ ಹಲವು ಮುದ್ರಣಗಳನ್ನು ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಅವರ ಎರಡನೇ ಕೃತಿ. ‘ನನ್ನ ಡ್ರೖೆವಿಂಗ್ ಡೈರಿ’ ಕೃತಿ ಪೂರ್ಣಗೊಂಡು ಮುದ್ರಣ ಹಂತದಲ್ಲಿತ್ತು. ತೇಜಸ್ವಿ ನಿಧನದ ನಂತರ ರಾಜೇಶ್ವರಿ ಮೂಡಿಗೆರೆಯ ಮನೆ ‘ನಿರುತ್ತರ’ದಲ್ಲಿ ವಾಸವಿದ್ದರು. ನಿರುತ್ತರಕ್ಕೆ ಬರುವ ತೇಜಸ್ವಿ ಅಭಿಮಾನಿಗಳು, ಓದುಗರಿಗೆ ಆದರಾತಿಥ್ಯ ಮಾಡುತ್ತಿದ್ದರು. ಬರವಣಿಗೆ, ಕೃಷಿ ಎಲ್ಲದರಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜದೊಂದಿಗೆ ಸದಾ ಸಂಪರ್ಕದಲ್ಲಿದ್ದರು. ನ.26ರಂದು ಮೂಡಿಗೆರೆ ಹ್ಯಾಂಡ್ಪೋಸ್ಟ್ನ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದು ಅವರ ಕೊನೆಯ ಕಾರ್ಯಕ್ರಮ.
ಮದುವೆಗೆ ಮುನ್ನವೇ ಮಲೆನಾಡ ನಂಟು: ತೇಜಸ್ವಿ ಅವರನ್ನು ಮದುವೆ ಆಗುವುದಕ್ಕೂ ಮುನ್ನವೇ ರಾಜೇಶ್ವರಿ ಮೂಡಿಗೆರೆಯೊಂದಿಗೆ ನಂಟು ಹೊಂದಿದ್ದರು. 1961ರಲ್ಲಿ ರಾಜೇಶ್ವರಿ ತಂದೆ ಮತ್ತು ಅಣ್ಣ ಭೂತನಕಾಡು ಎಂಬಲ್ಲಿ ಭೂಮಿ ಖರೀದಿಸಿ ತೋಟ ಮಾಡಿದ್ದರು. ತೋಟದಲ್ಲಿ ಹೆಂಚಿನ ಮನೆಯನ್ನೂ ಮಾಡಿದ್ದರು. ಭೂತನಕಾಡಿಗೆ ರಾಜೇಶ್ವರಿ ಬರುತ್ತಿದ್ದರು. ತೋಟದ ಸಮೀಪದ ಹಳ್ಳದಲ್ಲಿ ಮೀನು ಹಿಡಿಯಲು ತೇಜಸ್ವಿ ಹೋಗುತ್ತಿದ್ದರು. ಆಗ ತೇಜಸ್ವಿ ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಬೆಂಗಳೂರಿನಿಂದ ಬಂದ ಕುಟುಂಬದವರೇ ತೋಟ ಮಾಡಿರುವಾಗ ಮಲೆನಾಡಿಗ ಏಕೆ ತೋಟ ಮಾಡಬಾರದೆಂದು ತೇಜಸ್ವಿ ಯೋಚಿಸಿ ತಂದೆ ಕುವೆಂಪು ಅವರೊಂದಿಗೆ ರ್ಚಚಿಸಿ ತೋಟ ಮಾಡಿದರು.
ಕನಸಾಗೇ ಉಳಿದ ಪೂಚಂತೇ ಭವನ: ತೇಜಸ್ವಿ ಅವರ ಬದುಕು-ಬರಹ-ಚಿಂತನೆಗಳ ಸಾಕಾರಕ್ಕಾಗಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವಸ್ತುಸಂಗ್ರಹಾಲಯವನ್ನು ಪೂರ್ಣಗೊಳಿಸಬೇಕು ಎಂಬುದು ರಾಜೇಶ್ವರಿ ಕನಸಾಗಿತ್ತು. ತೇಜಸ್ವಿ ಪ್ರತಿಷ್ಠಾನದ ವಸ್ತಸಂಗ್ರಹಾಲಯ ದಲ್ಲಿ ತೇಜಸ್ವಿ ಅವರ ಸ್ಕೂಟರ್, ಅವರು ಬಳಸಿದ ವಸ್ತುಗಳನ್ನು ನೀಡಿದ್ದರು. ‘ನಾನು ಬದುಕಿರುವಾಗಲೇ ವಸ್ತುಸಂಗ್ರಹಾಲಯ ನೋಡಬೇಕು’ ಎಂದು ರಾಜೇಶ್ವರಿ ಹೇಳಿದ್ದರು. ತೇಜಸ್ವಿ ಬಳಸಿದ ವಸ್ತುಗಳ ಹಿಂದಿನ ಕೆಲ ಸ್ವಾರಸ್ಯಕರ ವಿವರವನ್ನು ಆ ವಸ್ತುಗಳ ಜತೆಗೆ ಇಡಬೇಕು. ಆ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಆದರೆ ವಸ್ತುಸಂಗ್ರಹಾಲಯ ಕನಸಾಗಿಯೇ ಉಳಿಯಿತು.
ಲೇಖಕಿ, ಸಾಂಸ್ಕೃತಿಕ ಚಿಂತಕಿ ಕೆ.ವಿ. ರಾಜೇಶ್ವರಿ ತೇಜಸ್ವಿ ನಿಧನರಾಗಿರುವುದು ದುಃಖದ ಸಂಗತಿ. ತೇಜಸ್ವಿಯವರ ಪ್ರಭಾವದಿಂದ ಸ್ವತಃ ಲೇಖಕಿಯಾಗಿದ್ದರು. ಕುವೆಂಪು ಅವರ ಸೊಸೆಯಾಗಿ ವಿಶ್ವಮಾನವ ಸಂದೇಶ ಸಾರುವ ಮಂತ್ರಮಾಂಗಲ್ಯ ಮದುವೆ ಪರಿಚಯಿಸಿ, ಮಾದರಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
| ಡಾ. ಮಹೇಶ್ ಜೋಶಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ರಾಜೇಶ್ವರಿ ಅವರು ‘ನನ್ನ ತೇಜಸ್ವಿ’ ಕೃತಿಯಲ್ಲಿ ಕಾಡಿನ ಸಂತ ತೇಜಸ್ವಿ ಬಹುಮುಖಗಳ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
| ಟಿ.ಎಸ್.ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ