

ನವದೆಹಲಿ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಸ್ಮೃತಿ ಮಂದನಾ ಅವರು ಮುನ್ನಡೆಸಲಿದ್ದಾರೆ. ಆರ್ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ಫಾಫ್ ಡುಪ್ಲಿಸಿಸ್ ಅವರು ಆರ್ಸಿಬಿ ಮಹಿಳಾ ತಂಡದ ಮೊದಲ ನಾಯಕಿಯನ್ನಾಗಿ ಸ್ಮೃತಿ ಮಂದನಾರನ್ನು ಹೆಸರಿಸಿದ್ದಾರೆ.
ಫೆ.13ರಂದು ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಚೊಚ್ಚಲ ಹರಾಜು ಪ್ರಕ್ರಿಯೆಯಲ್ಲಿ 3.4 ಕೋಟಿ ರೂ.ಗಳ ದಾಖಲೆಯ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪಾಲಾಗುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರು ದುಬಾರಿ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದೀಗ ಆರ್ಸಿಬಿ ನಾಯಕತ್ವ ವಹಿಸಿಕೊಳ್ಳುವ ಮೂಲಕ ಮೊದಲ ಆವೃತ್ತಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನೆಡೆಸುವ ಭರವಸೆಯನ್ನು ಹೊಂದಿದ್ದಾರೆ. ಇಂದು ಆರ್ಸಿಬಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ ವಿರಾಟ್ ಮತ್ತು ಡುಪ್ಲೆಸಿಸ್ ಸ್ಮೃತಿ ಹೆಸರನ್ನು ಘೋಷಣೆ ಮಾಡುವ ಮೂಲಕ ಶುಭಕೋರಿದ್ದಾರೆ.
ಹೊಸ ಜವಬ್ದಾರಿಯನ್ನು ನೀಡಿದ್ದಕ್ಕೆ ಆರ್ಸಿಬಿಗೆ ಸ್ಮೃತಿ ಮಂದನಾ ಅವರು ಧನ್ಯವಾದಗಳನ್ನು ತಿಳಿಸಿದ್ದು, ಸಾಧ್ಯವಾದಷ್ಟು ತಂಡದ ಗೆಲುವಿದಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಹಾಗೆಯೇ ಆರ್ಸಿಬಿ ಅಭಿಮಾನಿಗಳಿಗೆ ಕರೆ ನೀಡಿರುವ ಸ್ಮೃತಿ, ನಿಮ್ಮ ಬೆಂಬಲ ಸದಾ ಇರಲಿ ಎಂದಿದ್ದಾರೆ. ಮೊದಲ ಆವೃತ್ತಿಯನ್ನು ಕಾತರದಿಂದ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)